ನವದೆಹಲಿ, ಫೆ.26- ರಾಷ್ಟ್ರ ನಿರ್ಮಾಣದಲ್ಲಿ ಕರ್ನಾಟಕ ಜನತೆಯ ಕೊಡುಗೆ ಸಾಕಷ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.ದೆಹಲಿ ಕರ್ನಾಟಕ ಸಂಘದ ಅಮೃತೋತ್ಸವದ ಅಂಗವಾಗಿ ಆಯೋಜಿಸಿದ್ದ ಬಾರಿಸು ಕನ್ನಡ ಡಿಂಡಿಮವ ಸಾಂಸ್ಕøತಿ ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕದ ಕೊಡುಗೆಗಳಿಲ್ಲದೆ ಭಾರತದ ಅಸ್ಮಿತೆ ಮತ್ತು ಸಂಪ್ರದಾಯಗಳನ್ನು ಊಹಿಸಲು ಸಾಧ್ಯವಾಗುವುದಿಲ್ಲ. ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವವು ಜರುಗುತ್ತಿದೆ. ಸಂಘದ ಅಭಿವೃದ್ಧಿಗೆ ಶ್ರಮಿಸಿದ ಎಲ್ಲಾ ಸದಸ್ಯರು ಹಾಗೂ ಮಹನೀಯರಿಗೂ ನಮನಗಳನ್ನು ಸಲ್ಲಿಸುವುದಾಗಿ ಹೇಳಿದರು.
ಎಲ್ಲಾದರೂ ಇರು ಎಂಥಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿ ವಾಣಿಯನ್ನು ಹೇಳುತ್ತಾ ಮಾತನಾಡಿದ ಅವರು, ದೇಶ ನಿರ್ಮಾಣ ಕಾರ್ಯದಲ್ಲಿ ಕರ್ನಾಟಕದ ಕೊಡುಗೆ ಸಾಕಷ್ಟಿದೆ. ಹನುಮಂತನಿಲ್ಲದೆ ಶ್ರೀ ರಾಮನಿಲ್ಲ. ಶ್ರೀ ರಾಮನಿಲ್ಲದೆ ರಾಮಾಯಣವೂ ಇಲ್ಲ ಎಂದು ಹೇಳಿದರು. ಏಕಭಾರತ ಶ್ರೇಷ್ಠ ಭಾರತದ ಮಂತ್ರವನ್ನು ಕನ್ನಡಿಗರು ಜಯಿಸಿದ್ದಾರೆ.
ರಾಷ್ಟ್ರ ಕವಿ ಕುವೆಂಪು ವಿರಚಿತ ನಾಡಗೀತೆಯನ್ನು ನಾವು ಆಲಿಸಿದ್ದೇವೆ. ಈ ನಾಡಗೀತೆಯೂ ಭಾರತ ಮತ್ತು ಕರ್ನಾಟಕದ ಹಲವು ಮಹತ್ವದ ವಿವರಗಳನ್ನು ಒಳಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭಕ್ತ ಹನುಮಂತನನೊಂದಿಗೆ ಕರ್ನಾಟಕವನ್ನು ಹೋಲಿಸಿದ ಪ್ರಧಾನಿಯವರು ಯುಗ ಬದಲಾವಣೆಯ ಯೋಜನೆ ಅಯೋಧ್ಯೆಯಲ್ಲಿ ಪ್ರಾರಂಭವಾಗಿ, ರಾಮೇಶ್ವರದಲ್ಲಿ ಮುಕ್ತಾಯವಾದರೂ ಅದಕ್ಕೆ ಬೇಕಾದ ಪೂರಕ ಶಕ್ತಿಯನ್ನು ಕರ್ನಾಟಕ ನೀಡಿದೆ ಎಂದು ಶ್ಲಾಘಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ನವಕರ್ನಾಟಕದಿಂದ ನವ ಭಾರತ ನಿರ್ಮಾಣ ಸಂಕಲ್ಪ ಯಶಸ್ವಿಯಾಗುತ್ತದೆ. ದಿಲ್ಲಿಯಲ್ಲಿ ಕನ್ನಡದ ಕಂಪು ಬಹಳ ಅದ್ಭುತವಾಗಿ ಕಾಣಿಸುತ್ತದೆ.ಕನ್ನಡ ನಾಡಿನಲ್ಲಿ ಹುಟ್ಟುವುದೇ ಸೌಭಾಗ್ಯ. ಕನ್ನಡ ನಾಡಿನಲ್ಲಿ ಬೆಳೆಯುವುದೇ ನಮ್ಮ ಭಾಗ್ಯ ಅಂತಹ ಸೌಭಾಗ್ಯ ಪಡೆದಿರುವ ನಾವೆಲ್ಲರೂ ಪೂರ್ವ ಜನ್ಮದ ಪುಣ್ಯವಂತರು ಎಂದು ಹೇಳಿದರು.
ನೈಸರ್ಗಿಕ, ಸಾಂಸ್ಕøತಿ, ಕಾಯಕ, ಆಧ್ಯಾತ್ಮಿಕ, ಜ್ಞಾನ, ತಂತ್ರಜ್ಞಾನ, ತಂತ್ರಾಂಶ ಜ್ಞಾನದಿಂದ ಕೂಡಿರುವ ಕನ್ನಡ ನಾಡಿನಲ್ಲಿ ಹುಟ್ಟಿದಂತಹ ಹಲವು ದಾರ್ಶನಿಕರು ವಿಶ್ವಮಾನ್ಯರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು ಮಹಾರಾಜರಿಂದ ಹಿಡಿದು ವಿಶ್ವೇಶ್ವರಯ್ಯ ಅವರನ್ನೊಳಗೊಂಡಂತೆ ಎಲ್ಲಾ ಕಾಯಕ ಎಂಜಿನಿಯರ್ಗಳಿಗೆ ಅಭಿನಂದಿಸುವುದಾಗಿ ಹೇಳಿದ ಅವರು ಕನ್ನಡದ ಸಮಗ್ರತೆ, ಅಖಂಡತೆಗೆ ಸಂಬಂಧಿಸಿದಂತೆ ಸದನದಲ್ಲಿ ವಿಧೇಯಕವನ್ನು ಅಂಗೀಕರಿಸಲಾಗಿದೆ. ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಪ್ರತಿಮೆಯನ್ನು ಕೂಡ ಅನಾವರಣ ಮಾಡಿದ್ದೇವೆ ಎಂದರು. ಪ್ರಧಾನ ಮಂತ್ರಿ ಅವರ 5 ಟ್ರಿಲಿಯನ್ ಡಾಲರ್ ಕನಸಿಗೆ ಮುಂದಿನ ವರ್ಷಗಳಲ್ಲಿ ಕರ್ನಾಟಕದ ಪಾಲು ಒಂದು ಟ್ರಿಲಿಯನ್ ಆಗಿರುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಸಿರಿಗೆರೆ ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ವಿಶ್ವೇಶ್ವರ ಪ್ರಸನ್ನ ತೀರ್ಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಕಾರಿ ಡಾ. ವೀರೇಂದ್ರ ಹೆಗಡೆ, ಶ್ರೀ ನಂಜಾವದೂತ ಸ್ವಾಮೀಜಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಕನ್ನಡ ಮತ್ತು ಸಂಸ್ಕøತಿ ಸಚಿವ ವಿ. ಸುನೀಲ್ ಕುಮಾರ್, ದೆಹಲಿ ಕನ್ನಡ ಸಂಘದ ಅಧ್ಯಕ್ಷ ಸಿ.ಎಂ. ನಾಗರಾಜು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
#PMModi, #Speech, #BarisuKannadaDimdimava,