ಲಸಿಕೆ ಲಭಿಸುವ ತನಕ ನಿರ್ಲಕ್ಷ್ಯ ಸಲ್ಲದು : ಪ್ರಧಾನಿ ಎಚ್ಚರಿಕೆ

ನವದೆಹಲಿ, ಸೆ.12-ಲಸಿಕೆ ಲಭಿಸುವ ತನಕ ನಿರ್ಲಕ್ಷ್ಯ ಸಲ್ಲದು ಎಂಬ ಘೋಷಣೆಯ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕೋವಿಡ್-19 ವೈರಸ್ ಪಿಡುಗಿನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಜಬ್ ತಕ್ ದವಾಯಿ ನಹಿ ತಬ್ ತಕ್ ದಿಲಾಹಿ ನಹಿ, ದೋ ಗಜ್ ದೂರಿ ಮಾಸ್ಕ್ ಹೈ ಜರೂರಿ (ಲಸಿಕೆ ಲಭಿಸುವ ತನಕ ನಿರ್ಲಕ್ಷ್ಯ ಸಲ್ಲದು , ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ) ಎಂದು ಅವರು ಪ್ರಾಸ ಬದ್ಧ ಘೋಷಣೆ ಮೂಲಕ ದೇಶದ ಜನರಿಗೆ ಕಿಲ್ಲರ್ ಕೊರೊನಾ ವೈರಸ್ ಬಗ್ಗೆ ಜಾಗ್ರತೆ ವಹಿಸುವಂತೆ ಸಲಹೆ ಮಾಡಿದರು.

ಪ್ರಧಾನಮಂತ್ರಿ ಆವಾಜ್ ಯೋಜನೆ (ಪಿಎಂಎವೈ) ಅಡಿ ಮಧ್ಯಪ್ರದೇಶದ ಗ್ರಾಮಾಂತರ ಪ್ರದೇಶಗಳಲ್ಲಿ 1.8 ಲಕ್ಷ ಮನೆಗಳ ಗೃಹ ಪ್ರವೇಶ ಸಮಾರಂಭದಲ್ಲಿ ಮಾತನಾಡಿದ ಅವರು, ಕೊರೊನಾ ಪಿಡುಗು ಇನ್ನೂ ಹೋಗಿಲ್ಲ. ನಮ್ಮ ವಿಜ್ಞಾನಿಗಳು ಲಸಿಕೆ ಅಭಿವೃದ್ಧಿಗಾಗಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಇದು ಅಭಿವೃದ್ಧಿಯಾಗುವ ತನಕ ಪ್ರತಿಯೊಬ್ಬರೂ ಜಾಗ್ರತೆಯಿಂದಿರ ಬೇಕು ಎಂದು ಕರೆ ನೀಡಿದರು.

ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಪುನರಾವರ್ತಿತ ಘೋಷಣೆ ಮಾಡಿದರು.