ವಾರಣಾಸಿಯಲ್ಲಿ ಮೋದಿ ಮೆಗಾ ರೋಡ್ ಶೋ
ವಾರಣಾಸಿ,ಏ.25- ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಕ್ಷೇತ್ರ ಪ್ರತಿಷ್ಠಿತ ವಾರಣಾಸಿ ಲೋಕಸಭಾ ಕ್ಷೇತ್ರದಿಂದ 2ನೇ ಬಾರಿ ಮರು ಆಯ್ಕೆ ಬಯಸಿ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಇಂದು ಮೆಗಾ ರೋಡ್ ಶೋ ನಡೆಸಿ ತಮ್ಮ ಶಕ್ತಿಪ್ರದರ್ಶನ ನಡೆಸಿದರು.
ಈ ಮೆಗಾ ರೋಡ್ ಶೋನಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ ಅಗ್ರ ಮುಖಂಡರುಗಳು, ಅಸಂಖ್ಯಾತ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡರು.
ವಾರಣಾಸಿಯ 7 ಕಿ.ಮೀ ಉದ್ದಕ್ಕೂ ಬಿಜೆಪಿ ಧ್ವಜಗಳು ರಾರಾಜಾಜಿಸುತ್ತಾ ಮೋದಿ ಪರ ಜೈಕಾರಗಳು ಮಾದರ್ನಿಸಿದವು. ದೇವಾಲಯಗಳ ನಗರಿ ವಾರಣಾಸಿ ಇಂದು ಅಕ್ಷರಶಃ ಕೇಸರಿಮಯವಾಯಿತು.
ಬನಾರಸ್ ಹಿಂದು ವಿಶ್ವವಿದ್ಯಾನಿಲಯದಿಂದ ಮೋದಿ ಅವರ ರ್ಯಾಲಿ ಆರಂಭಗೊಂಡಿತು. ರ್ಯಾಲಿ ಆರಂಭಕ್ಕೂ ಮುನ್ನ ಮೋದಿ ಅವರು ಪಂಡಿತ್ ಮೋಹನ್ ಮಾಳಿವೀಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ವಾರಣಾಸಿಗೆ ಆಗಮಿಸಿ ಮೋದಿ ಅವರನ್ನು ಸ್ವಾಗತಿಸಲು 101 ಸ್ವಾಗತ ಕಮಾನುಗಳನ್ನು ಕೂಡ ನಿರ್ಮಿಸಲಾಗಿತ್ತು.
ಶಿರೋಮಣಿ ಅಕಾಲಿ ದಳ (ಎಸ್ಎಡಿ) ನ ಪ್ರಕಾಶ್ ಸಿಂಗ್ ಬಾದಲ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಬಿಜೆಪಿ ನೇತೃತ್ವದ ಎಎನ್ಡಿಯ ಇತರ ಘಟಕಗಳ ನಾಯಕರು, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕರೆ ಮೊದಲಾದವರು ರೋಡ್ ಶೋನಲ್ಲಿ ಮೋದಿಗೆ ಸಾಥ್ ನೀಡಿದರು.
ಹಿರಿಯ ಬಿಜೆಪಿ ಮುಖಂಡರು ಮತ್ತು ಮೋದಿ ಅವರ ಸಂಪುಟ ಸಹೋದ್ಯೋಗಿಗಳು ಬಿಜೆಪಿ ನೇತೃತ್ವದ ರಾಜ್ಯಗಳ ಮುಖ್ಯಮಂತ್ರಿಗಳು ಜೊತೆಯಲ್ಲೂ ಸಹ ಪಾಲ್ಗೊಂಡಿದ್ದರು.
ಸಂಜೆ ದಶಾಶ್ವಮೇಧ ಘಾಟ್ನಲ್ಲಿ ಗಂಗಾರತಿ ಮಾಡುವ ಮೂಲಕ ರೋಡ್ ಶೋಗೆ ಮುಕ್ತಾಯಗೊಳ್ಳಲಿದೆ. ನಾಳೆ ವಾರಣಾಸಿಯಿಂದ ಮೋದಿ ಅವರು ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಲಿದ್ದಾರೆ.