ಪೊಲೀಸರಿಂದಲೇ ಡ್ರಗ್ಸ್ ಮಾರಾಟ ಪ್ರಕರಣ, ಸಿಸಿಬಿಯಿಂದ ತನಿಖೆ

Social Share

ಬೆಂಗಳೂರು, ಜ.20- ಮುಖ್ಯಮಂತ್ರಿ ನಿವಾಸದ ಸಮೀಪ ಇಬ್ಬರು ಕಾನ್ಸ್ಟೆಬಲ್ಗಳು ಗಾಂಜಾ ಮಾರಾಟ ಯತ್ನ ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಿಲ್ಲ ಎಂದು ನಗರ ಪೊಲೀಸ್ ಆಯುಕ್ತರು ಮುಂದಿನ ತನಿಖೆಗಾಗಿ ಸಿಸಿಬಿಗೆ ವಹಿಸಿದ್ದಾರೆ.
ಸಿಎಂ ಮನೆ ಮುಂದೆ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಕೋರಮಂಗಲ ಪೊಲೀಸ್ ಠಾಣೆ ಕಾನ್ಸ್ಟೆಬಲ್ಗಳಾದ ಸಂತೋಷ್ ಮತ್ತು ಶಿವಕುಮಾರ್ ಕರ್ತವ್ಯ ದುರುಪಯೋಗಪಡಿಸಿಕೊಂಡು 80 ಅಡಿ ರಸ್ತೆಯಲ್ಲಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದರು. ಆಗ ಸುದ್ದಿ ತಿಳಿದ ಆರ್ಟಿ ನಗರ ಠಾಣೆ ಪೊಲೀಸರು ಇವರಿಬ್ಬರು ಸೇರಿದಂತೆ ಐದು ಮಂದಿಯನ್ನು ಬಂಧಿಸಿದ್ದರು.
ಬಂಧಿತರು ನಾಲ್ಕು ದಿನಗಳಲ್ಲಿ ಜಾಮೀನು ಪಡೆದು ಹೊರಬಂದಿದ್ದರು.
ಈ ಪ್ರಕರಣದಿಂದ ಸಾರ್ವಜನಿಕ ವಲಯದಲ್ಲಿ ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟಾಗಿತ್ತು. ಇದನ್ನು ಗಂಬೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ಅವರು ಸಮರ್ಪಕವಾಗಿ ತನಿಖೆ ನಡೆಸದೆ ಕರ್ತವ್ಯಲೋಪವೆಸಗಿದ ಆರೋಪದ ಮೇಲೆ ಆರ್ಟಿ ನಗರ ಠಾಣೆ ಇನ್ಸ್ಪೆಕ್ಟರ್ ಅಶ್ವಥ್ಗೌಡ ಮತ್ತು ಸಬ್ಇನ್ಸ್ಪೆಕ್ಟರ್ ವೀರಭದ್ರಸ್ವಾಮಿ ಅವರನ್ನು ಅಮಾನತುಗೊಳಿಸಿದ್ದಾರೆ.
ಕಾನ್ಸ್ಟೆಬಲ್ಗಳ ಪೂರ್ವಾಪರ ಪರಿಶೀಲಿಸದೆ ಸಿಎಂ ನಿವಾಸದ ಭದ್ರತೆಗೆ ನಿಯೋಜನೆ ಮಾಡಿದ್ದ ಕಾರಣಕ್ಕಾಗಿ ಆಗ್ನೇಯ ವಿಭಾಗದ ಡಿಸಿಪಿ ಮಹದೇವ ಶ್ರೀನಾಥ್ ಜೋಷಿ ಮತ್ತು ವಿವಿಐಪಿ ವಿಭಾಗದ ಡಿಸಿಪಿ ಮಂಜುನಾಥ್ ಬಾಬು ಹಾಗೂ ಜೆಸಿ ನಗರ ಉಪವಿಭಾಗದ ಎಸಿಪಿ ಅವರಿಗೂ ನೋಟಿಸ್ ನೀಡಿರುವ ಆಯುಕ್ತರು, ಪ್ರಕರಣದ ಸಂಪೂರ್ಣ ವಿವರಣೆ ನೀಡುವಂತೆ ಆದೇಶಿಸಿದ್ದಾರೆ.
ಇದೀಗ ಈ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಲು ಆಯುಕ್ತರು ಸಿಸಿಬಿಗೆ ವರ್ಗಾಯಿಸಿದ್ದು, ಸಿಸಿಬಿ ಪೊಲೀಸರು ಪ್ರಕರಣದ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
ಕರ್ತವ್ಯಲೋಪದ ಬಗ್ಗೆ ಆರ್ಟಿ ನಗರ ಠಾಣೆ ಇನ್ಸ್ ಪೆಕ್ಟರ್ ಮತ್ತು ಸಬ್ಇನ್ಸ್ಪೆಕ್ಟರ್ ಹಾಗೂ ಮತ್ತಿತರ ಸಿಬ್ಬಂದಿಯ ವಿಚಾರಣೆ ನಡೆಸಿ ವರದಿ ನೀಡುವಂತೆ ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಆರ್.ಜೈನ್ ಅವರಿಗೆ ಆಯುಕ್ತರು ಸೂಚಿಸಿದ್ದಾರೆ.

Articles You Might Like

Share This Article