ಪೊಲೀಸ್ ಇಲಾಖೆಯಲ್ಲಿ ತೃತೀಯ ಲಿಂಗಿಗಳ ನೇಮಕ

Social Share

ಬೆಂಗಳೂರು,ಸೆ.13- ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪಡೆಗಳ ಕಾನ್‍ಸ್ಟೆಬಲ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಪ್ರಪ್ರಥಮ ಬಾರಿಗೆ ಪುರುಷ ತೃತೀಯ ಲಿಂಗಿ ಸಮುದಾಯದ 79 ಅಭ್ಯರ್ಥಿಗಳನ್ನು ಒಳಗೊಂಡಂತೆ ಒಟ್ಟು 3484 ಹುದ್ದೆಗಳನ್ನು ಭರ್ತಿ ಮಾಡಲು ಗೃಹ ಇಲಾಖೆ ಮುಂದಾಗಿದೆ.

ಎಲ್ಲಾ ಹುದ್ದೆಗಳನ್ನು ಅತ್ಯಂತ ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತಿದ್ದು, ಅ.31ರೊಳಗೆ ಆನ್‍ಲೈನ್ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371ಎ ಮೀಸಲಾತಿ ಯಂತೆ ಒಟ್ಟು 420 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದರಲ್ಲಿ 11 ಪುರುಷ ತೃತೀಯ ಲಿಂಗಿಗಳಿಗೆ ಮೀಸಲಿಡಲಾಗಿದೆ.

ರಾಜ್ಯದ ಇತರ ಭಾಗಗಳಲ್ಲಿ ಒಟ್ಟು 3064 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, 68 ಹುದ್ದೆಗಳು ತೃತೀಯ ಲಿಂಗಿ ಪುರುಷರಿಗೆ ಮೀಸಲಾತಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಎಲ್ಲಾ ವಿಭಾಗಗಳಲ್ಲಿ ಒಟ್ಟು ಒಂದು ಲಕ್ಷಕ್ಕೂ ಹೆಚ್ಚು ಹುದ್ದೆಗಳಲ್ಲಿ ಸುಮಾರು 16000 ಹುದ್ದೆಗಳು ಭರ್ತಿಯಾಗಬೇಕಿದೆ.

ನೇಮಕಾತಿ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿ ನಡೆಯಲಿದ್ದು, ಅಭ್ಯರ್ಥಿಗಳು, ಯಾವುದೇ ಅಕ್ರಮಗಳ ಅಥವಾ ವಾಮಮಾರ್ಗದ ಮೂಲಕ ಹುದ್ದೆಗಳನ್ನು ಪಡೆಯಲು ಯತ್ನಿಸಿದರೆ, ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

Articles You Might Like

Share This Article