ಬೆಂಗಳೂರು,ನ.28- ಮತದಾರರ ವೈಯಕ್ತಿಕ ಮಾಹಿತಿ ಕಳುವು ಪ್ರಕರಣದ ನೆಪದಲ್ಲಿ ಬಿಬಿಎಂಪಿ ಅಧಿಕಾರಿಗಳಿಗೆ ಪೊಲೀಸರು ನೀಡುತ್ತಿರುವ ಚಿತ್ರಹಿಂಸೆ ಹಾಗೂ ಕಿರುಕುಳ ತಪ್ಪಿಸಬೇಕು ಎಂದು ಬಿಬಿಎಂಪಿ ಅಧಿಕಾರಿಗಳು
ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.
ಚಿಲುಮೆ ಸಂಸ್ಥೆ ನಡೆಸಿರುವ ಕರ್ಮಕಾಂಡದಿಂದಾಗಿ ಪೊಲೀಸರು ಕಂದಾಯಾಕಾರಿಗಳು ಹಾಗೂ ಸಹ ಕಂದಾಯ ಅಧಿಕಾರಿಗಳನ್ನು ಕರೆದು ಮನಬಂದಂತೆ ವಿಚಾರಣೆ ನಡೆಸುತ್ತಿರುವುದರಿಂದ ನಮ್ಮ ಸಿಬ್ಬಂದಿಗಳು ಖಿನ್ನತೆಗೆ ಒಳಗಾಗಿದ್ದಾರೆ.
ಹೀಗಾಗಿ ವಿಚಾರಣೆ ಸಂದರ್ಭದಲ್ಲಿ ನಮ್ಮ ಅಧಿಕಾರಿಗಳಿಗೆ ಚಿತ್ರಹಿಂಸೆ ನೀಡುವುದನ್ನು ನಿಲ್ಲಿಸಬೇಕು ಎಂದು ಸಂಘದ ಅಧ್ಯಕ್ಷ ಅಮೃತ್ರಾಜ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಪೊಲೀಸರು ಇದೇ ರೀತಿ ಚಿತ್ರಹಿಂಸೆ ನೀಡಿದರೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಕೆಲವರು ನನ್ನ ಬಳಿ ಬೇಸರ ಹೊರ ಹಾಕಿದ್ದಾರೆ.
ಹೀಗಾಗಿ ಕೂಡಲೆ ಚಿತ್ರಹಿಂಸೆ ನೀಡುವುದನ್ನು ತಪ್ಪಿಸಲು ಹಿರಿಯ ಅಧಿಕಾರಿಗಳು ಮಧ್ಯ ಪ್ರವೇಶಿಸಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಅಕ್ರಮ ನಡೆದಿದೆ ಎನ್ನುವುದಾದರೆ ನೀವು ವಿಶೇಷ ತನಿಖಾ ತಂಡ ರಚನೆ ಮಾಡಿ ಎಲ್ಲರನ್ನೂ ಒಂದೇ ಕಡೆ ವಿಚಾರಣೆ ಮಾಡಿದರೆ ನಾವು ಅದಕ್ಕೆ ಸಾಥ್ ನೀಡುತ್ತೇವೆ ಅದನ್ನು ಬಿಟ್ಟು ನೀವು ಮನಸ್ಸೋಇಚ್ಚೆ ವಿಚಾರಣೆ ಮಾಡುವುದನ್ನು ತಪ್ಪಿಸಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಪೊಲೀಸರ ಕಾಟದಿಂದ ಕೆಲವು ಅಧಿಕಾರಿಗಳು ಕಚೇರಿಗಳಿಗೆ ಬರಲು ಹೆದರುತ್ತಿದ್ದಾರೆ. ಇದು ತೆರಿಗೆ ಸಂಗ್ರಹ, ವೋಟರ್ ಐಡಿ ಪರಿಶೀಲನೆ ಮತ್ತಿತರ ಕೆಲಸಗಳಿಗೆ ತೊಂದರೆಯಾಗುವುದನ್ನು ಪರಿಗಣಿಸಿ ಬಿಬಿಎಂಪಿ ಅಧಿಕಾರಿಗಳಿಗೆ ಕಿರುಕುಳ ನೀಡುವುದನ್ನು ತಪ್ಪಿಸಬೇಕು ಎಂದು ಅವರು ಕೇಳಿಕೊಂಡಿದ್ದಾರೆ.
ರೈತರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ 10 ಲಕ್ಷ ಪ್ರೋತ್ಸಾಹ ಧನ ಘೋಷಿಸಿ
ಪೊಲೀಸರು ಇದೇ ರೀತಿ ತಮ್ಮ ದಬ್ಬಾಳಿಕೆ ಮುಂದುವರೆಸಿದರೆ ಜನವರಿಯಲ್ಲಿ ಪ್ರಕಟಗೊಳ್ಳಬೇಕಿರುವ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿಪಡುವಂತಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.