ಬೆಂಗಳೂರು,ಸೆ.29- ಕೇಂದ್ರ ಸರ್ಕಾರ ಪಿಎಫ್‍ಐ ಹಾಗೂ ಅದರ ಅಂಗಸಂಸ್ಥೆಗಳ ಚಟುವಟಿಕೆ ಗಳಿಗೆ 5 ವರ್ಷ ನಿಷೇಧ ಹಾಕುತ್ತಿದ್ದಂತೆ ನಗರ ಸೇರಿದಂತೆ ರಾಜ್ಯದಲ್ಲಿರುವ ಕಚೇರಿಗಳಿಗೆ ಬೀಗ ಜಡಿಯಲಾಗುತ್ತಿದೆ. ಮಂಗಳೂರು, ಉಡುಪಿ, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ರಾಯ ಚೂರು, ಕೊಪ್ಪಳ, ಬಳ್ಳಾರಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಕಚೇರಿಗಳಿಗೆ ಕೇಂದ್ರ ಸರ್ಕಾರದ ಸೂಚನೆಯಂತೆ ಬೀಗ ಹಾಕಲಾಗಿದೆ.
ಮಂಗಳೂರಿನಲ್ಲಿ 21, ಉಡುಪಿ 9, ಚಿಕ್ಕಮಗಳೂರು 2, ರಾಯಚೂರು, ಕಲಬುರಗಿ, ಬೆಂಗಳೂರು ಸೇರಿದಂತೆ
ಸುಮಾರು 50ಕ್ಕೂ ಹೆಚ್ಚು ಕಚೇರಿಗಳಿಗೆ ಬೀಗ ಜಡಿಯುವ ಕಾರ್ಯ ಭರದಿಂದ ಸಾಗಿದೆ. ಕೇಂದ್ರ ಗೃಹ ಇಲಾಖೆ ಅಸೂಚನೆ ಹೊರಡಿಸಿದ ಮರುಕ್ಷಣವೇ ಎಚ್ಚೆತ್ತುಕೊಂಡ ರಾಜ್ಯ ಗೃಹ ಇಲಾಖೆ, ಪಿಎಫ್‍ಐ ಮತ್ತು ಅದರ ಸಹಸಂಸ್ಥೆಗಳ ಕಚೇರಿಗಳನ್ನು ಹುಡುಕಿ ಹುಡುಕಿ ಬೀಗ ಹಾಕುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಪಿಎಫ್‍ಐಗೆ ಯಾವುದೇ ಅಕೃತ ಕಚೇರಿ ಇರಲಿಲ್ಲ. ಎಸ್‍ಡಿಪಿಐ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಪಂದುಬೆಟ್ಟು ಮಸೀದಿ ಬಳಿಯ ಕಟ್ಟಡದಲ್ಲಿದ್ದ ಕಚೇರಿ, ಹೊಡೆಗಂಗುಳ್ಳಿ ಮತ್ತಿತರ ಕಡೆ ಮಧ್ಯರಾತ್ರಿ ಪೊಲೀಸರು ಬೀಗ ಹಾಕಿದ್ದಾರೆ.
ಇದೇ ವೇಳೆ ಎಸ್‍ಡಿಪಿಐ ಬಶೀರ್ ಮತ್ತು ನಜೀರ್ ಮನೆಗಳಿಗೂ ದಾಳಿ ನಡೆಸಲಾಗಿತ್ತು. ಆದರೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಪೊಲೀಸರು ಹಿಂತಿರುಗಿದ್ದಾರೆ. ಮಂಗಳೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಸಮೀಪ ಇರುವ ನೆಲ್ಲಿಕಾಯಿ ಮಠ ರಸ್ತೆಯಲ್ಲಿರುವ ಪಿಎಫ್‍ಐ ಕಚೇರಿಗೆ ಭಾರೀ ಬಿಗಿಭದ್ರತೆ ನಡುವೆ ಪೊಲೀಸರು ಆಗಮಿಸಿ ಬೀಗ ಹಾಕಿದ್ದಾರೆ.
ನಗರಪೊಲೀಸ್ ಆಯುಕ್ತ ಶಶಿಕುಮಾರ್ ಅವರೇ ಸ್ಥಳದಲ್ಲಿ ಖುದ್ದು ಹಾಜರಿದ್ದು, ಸುಮಾರು 21ಕ್ಕೂ ಹೆಚ್ಚು ಕಡೆ ಕಚೇರಿಗಳನ್ನು ಬಂದ್ ಮಾಡಲಾಗಿದೆ. ಈ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದ ಮುಖಂಡರನ್ನು ಈಗಾಗಲೇ ಎನ್‍ಐಎ ಮತ್ತು ಸ್ಥಳೀಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯದಲ್ಲೇ ಅವರ ಖಾತೆಗಳನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.
ಪಿಎಫ್‍ಐ ಸಂಘಟನೆ ಮೇಲೆ ಕಾನೂನು ಕ್ರಮ ಜರುಗಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಗಳಿಗೆ ನೀಡಿದೆ. ಸೆಕ್ಷನ್ 7ರಡಿ ಕಚೇರಿಗಳಿಗೆ ಬೀಗ ಹಾಕುವುದು, ಸೆಕ್ಷನ್ 8ರಡಿ ರಾಜ್ಯ ಸರ್ಕಾರಕ್ಕಿರುವ ಅಧಿಕಾರವನ್ನು ಚಲಾಯಿಸಿ ಕ್ರಮ ತೆಗೆದುಕೊಳ್ಳಬಹುದೆಂದು ಸೂಚನೆ ಕೊಟ್ಟಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದಲ್ಲಿರುವ ಪಿಎಫ್‍ಐ ಕಚೇರಿಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಇನ್ನು ಮುಂದೆ ಈ ಸಂಘಟನೆಯ ಪದಾಧಿಕಾರಿಗಳು ಇಲ್ಲವೇ ಮುಖಂಡರು ಎಲ್ಲಿಯೂ ಕೂಡ ಪ್ರತಿಭಟನೆ ಆಯೋಜಿಸುವಂತಿಲ್ಲ. ಸಾರ್ವಜನಿಕ ವಂತಿಗೆ ಸ್ವೀಕರಿಸುವುದಕ್ಕೂ ನಿರ್ಬಂಧ ಹಾಕಲಾಗಿದೆ. ಯಾವುದೇ ಪತ್ರಿಕಾ ಪ್ರಕಟಣೆ, ಪುಸ್ತಕ ಪ್ರಕಟಣೆ ಮಾಡಿದರೆ ಅವರನ್ನು ಬಂಧಿಸಲು ಅವಕಾಶವಿದೆ.