ಬೆಂಗಳೂರು,ಮಾ.4- ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಪೊಲೀಸರು ತುರ್ತು ಸಂದರ್ಭದಲ್ಲೂ ತ್ವರಿತವಾಗಿ ಸ್ಥಳಕ್ಕೆ ದಾವಿಸಲು ಅನುಕೂಲವಾಗುವಂತೆ 50 ಕೋಟಿ ರೂ. ವೆಚ್ಚದಲ್ಲಿ ಮೊಬಿಲಿಟಿ ಯೋಜನೆ ಅನುಷ್ಠಾನಗೊಳಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
( ಇಲ್ಲಿದೆ ಕಂಪ್ಲೀಟ್ ಬಜೆಟ್ ಹೈಲೈಟ್ಸ್ )
ಮೊಬಿಲಿಟಿ ಯೋಜನೆ ಪೊಲೀಸರಿಗೆ ಮತ್ತಷ್ಟು ಶಕ್ತಿ ನೀಡಲಿದ್ದು, ತುರ್ತು ಸಂದರ್ಭಗಳಲ್ಲಿ ಕ್ಷಿಪ್ರ ಪ್ರತಿಕ್ರಿಯೆಗೆ ಅನುಕೂಲವಾಗಿದೆ. ಇದರ ಜತೆಗೆ ಐದು ಪೊಲೀಸ್ ಆಯುಕ್ತಾಲಯಗಳಲ್ಲಿ ತಲಾ 200 ಸರ್ವಲೆನ್ಸ್ ಕ್ಯಾಮೆರಾಗಳನ್ನು ಅಳವಡಿಸುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಒಂದು ನೂತನ ಕೆಎಸ್‍ಆರ್‍ಪಿ ಮಹಿಳಾ ಕಂಪೆನಿಯನ್ನು ಪ್ರಾರಂಭಿಸಲಾಗುವುದು. ಬೆಳಗಾವಿ ಅಧಿವೇಶನ ಮತ್ತು ಇತರ ಕಾರ್ಯಕ್ರಮಗಳ ಬಂದೋಬಸ್ತ್ ಕರ್ತವ್ಯಕ್ಕೆ ಬರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತಂಗಲು ಅನುಕೂಲವಾಗುವಂತೆ ಬ್ಯಾರಕ್ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿಗಳ ವಿಮಾ ಮೊತ್ತವನ್ನು 1 ಲಕ್ಷ ದಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸ್ಪಂದಿಸಲು ದಾವಣಗೆರೆಯಲ್ಲಿ ಎಸ್‍ಡಿಆರ್‍ಎಫ್ ಕಂಪೆನಿ ಸ್ಥಾಪಿಸಲಾಗುತ್ತಿದೆ. ಬಂೀಧಿಖಾನೆ ಅಭಿವೃದ್ಧಿ ಮಂಡಳಿ ರಚಿಸಿ ಕೈದಿಗಳಿಗೆ ತರಬೇತಿ ನೀಡಿ ಅವರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲಾಗುತ್ತದೆ.
ಜೈಲುಗಳಲ್ಲಿ ಮೊಬೈಲ್ ಬಳಕೆ ನಿಯಂತ್ರಿಸಲು ತಪಾಸಣೆಗಾಗಿ ಅತ್ಯಾಧುನಿಕ ಮಾದರಿ ಉಪಕರಣಗಳು ಹಾಗೂ ಮೊಬೈಲ್ ಜಾಮರ್‍ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಹೊಸದಾಗಿ ಕಾರಾಗೃಹ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪೊಲೀಸ್ ಗೃಹ ಯೋಜನೆಯ ಎರಡನೇ ಹಂತಕ್ಕೆ 250 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, ಹುಬ್ಬಳ್ಳಿ ಮತ್ತು ಬಳ್ಳಾರಿ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಗಳಿಗೆ ಆಧುನಿಕ ಸೌಲಭ್ಯ ಒದಗಿಸಿ ಪರೀಕ್ಷಾ ವರದಿಗಳು ನಿಗದಿತ ಸಮಯಕ್ಕೆ ತನಿಖಾಕಾರಿಗಳ ತಲುಪಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಒಳಾಡಳಿತ ಇಲಾಖೆಯಿಂದ ಮೂರು ಲಕ್ಷ ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆ ತರಬೇತಿ ನೀಡಲಾಗುವುದು ಎಂದು ಹೇಳಿದ್ದಾರೆ.
