ಪೊಲೀಸ್ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಇಲ್ಲ

Social Share

ಬೆಂಗಳೂರು,ಸೆ.20- ಸದ್ಯದ ಪರಿಸ್ಥಿತಿಯಲ್ಲಿ ಪೊಲೀಸ್ ನೇಮಕಾತಿಯ ವಯೋಮಿತಿ ಸಡಿಲಿಕೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ವಿದಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಪೊಲೀಸ್ ಕಾನ್‍ಸ್ಟೆಬಲ್‍ಗಳ ನೇಮಕಾತಿ ವೇಳೆ ವಯೋಮಿತಿ ಸಡಿಲಿಕೆ ಮಾಡಬೇಕೆಂಬ ಬೇಡಿಕೆ ಇದೆ. ಅನೇಕರು ನನಗೂ ಕೂಡ ದೂರವಾಣಿ ಕರೆ ಮಾಡಿ ಸಡಿಲಿಕೆ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಆದರೆ ಸದ್ಯಕ್ಕೆ ಅಂತಹ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಪುನರುಚ್ಚರಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಪ್ರೀತಮ್ ಗೌಡ ಅವರು, ಪೊಲೀಸ್ ನೇಮಕಾತಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ವೇಳೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪೊಲೀಸ್ ನೇಮಕಾತಿಗೆ ವಯೋಮಿತಿ ಸಡಿಲಿಕೆ ಮಾಡಬೇಕೆಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಾಮಾನ್ಯ ವರ್ಗಕ್ಕೆ 18ರಿಂದ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. 2 ವರ್ಷ ಕಡಿಮೆ ಮಾಡಬೇಕೆಂಬ ಒತ್ತಡ ಇದೆ. ಯುವಕರನ್ನೇ ನೇಮಕಾತಿ ಮಾಡಿಕೊಳ್ಳುತ್ತಿರುವುದರಿಂದ ಸಡಿಲಿಕೆ ಸಾಧ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ವೀರಚಾರಿ ಆತ್ಮಹತ್ಯೆ

ಗೃಹ ಇಲಾಖೆಯಲ್ಲಿ ಪ್ರಸ್ತುತ 9432 ಹುದ್ದೆಗಳು ಖಾಲಿ ಇವೆ. ಪೊಲೀಸ್ ಕಾನ್‍ಸ್ಟೆಬಲ್(ಸಿವಿಲ್)-2874, ಸಿಎಎಆರ್/ಡಿಎಆರ್ 3512, ಪಿಸಿ(ಎಫ್‍ಪಿಬಿ)-5, ಪಿಸಿ(ವೈರ್‍ಲೆಸ್)-99, ಆರ್‍ಪಿಸಿ(ಕೆಎಸ್‍ಆರ್‍ಪಿ) 2757, ಪಿಸಿ(ಕೆಎಸ್/ಐಎಸ್‍ಎಫ್) 185 ಹುದ್ದೆಗಳು ಖಾಲಿಯಿವೆ ಎಂದರು.

ನಾವು ಅಧಿಕಾರ ವಹಿಸಿಕೊಂಡಾಗ 22,000 ಹುದ್ದೆಗಳು ಖಾಲಿ ಇದ್ದವು. ಒಂದು ಕಾಲದಲ್ಲಿ 35 ಸಾವಿರ ಹುದ್ದೆ ಹಾಗೇ ಉಳಿದಿದ್ದವು. 12-09-2020ರಲ್ಲಿ 3500 ಪೊಲೀಸ್ ಕಾನ್‍ಸ್ಟೆಬಲ್‍ಗಳ ನೇಮಕಾತಿಗೆ ಅಸೂಚನೆ ಹೊರಡಿಸಲಾಗಿತ್ತು. ಈ ಬಾರಿ 1500 ಪೊಲೀಸ್ ಕಾನ್‍ಸ್ಟೆಬಲ್‍ಗಳ ಹುದ್ದೆಗಳಿಗೆ ಅಸೂಚನೆ ಹೊರಡಿಸುತ್ತೇವೆ. ಒಟ್ಟು 5 ಸಾವಿರ ಹುದ್ದೆಗಳು ಭರ್ತಿಯಾಗಲಿವೆ ಎಂದರು.

ಈ ವೇಳೆ ಪ್ರೀತಂಗೌಡ ಅವರು ಖಾಲಿ ಇರುವ ಹುದ್ದೆಗಳನ್ನು ಆದಷ್ಟು ಶೀಘ್ರ ಭರ್ತಿ ಮಾಡುವುದರಿಂದ ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಸರ್ಕಾರಕ್ಕೆ ಸಲಹೆ ಮಾಡಿದರು.

ಇದಕ್ಕೆ ಆಕ್ಷೇಪಿಸಿದ ಜ್ಞಾನೇಂದ್ರ ಪೊಲೀಸ್ ಇಲಾಖೆಯಲ್ಲಿ ನಿರುದ್ಯೋಗ ನಿವಾರಣೆಯಾಗಲಿ ಎಂದು ಉದ್ಯೋಗ ತುಂಬುವುದಿಲ್ಲ. ದೈಹಿಕವಾಗಿ ಸಮರ್ಥ ಇರುವವರನ್ನು ಮಾತ್ರ ಆಯ್ಕೆ ಮಾಡುತ್ತೇವೆ. ಕೊರೊನಾ ಸಂಕಷ್ಟದಲ್ಲೂ ಹುದ್ದೆಗಳಿಗೆ ನೇಮಕ ಮಾಡಿದ್ದೇವೆ. ಹೀಗಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದಿಲ್ಲ ಎಂದರು.

Articles You Might Like

Share This Article