ಬೆಂಗಳೂರು, ಮಾ. 15- ಅತಿ ಬೇಗ ಶ್ರೀಮಂತರಾಗಬೇಕೆಂಬ ದುರಾಸೆಯಿಂದ ಇಬ್ಬರು ರೈಲ್ವೆ ಪೊಲೀಸರು ರಾಯಚೂರು ಮೂಲದ ಇಬ್ಬರನ್ನು ಬೆದರಿಸಿ 1.21 ಕೋಟಿ ಮೌಲ್ಯದ 2 ಕೆಜಿಗೂ ಹೆಚ್ಚು ಚಿನ್ನಾಭರಣಗಳನ್ನು ದರೋಡೆ ಮಾಡಿದುದ್ದು ವಿಚಾರಣೆಯಿಂದ ಗೊತ್ತಾಗಿದೆ.
ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾ.11ರಂದು ರಾತ್ರಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ವಿಜಯಪುರ ರೈಲ್ವೆ ವಿಭಾಗದ ಕಾನ್ಸ್‍ಸ್ಟೇಬಲ್‍ಗಳಾಗಿರುವ ಮೌನೇಶ್ ಮತ್ತು ಸಿದ್ದಪ್ಪ ಬಂಧಿತರಾಗಿದ್ದು, ಇವರಿಬ್ಬರನ್ನು ವಿಚಾರಣೆಗೊಳಪಡಿಸಿದಾಗ ಶ್ರೀಮಂತರಾಗಲು ಈ ಕೃತ್ಯ ವೆಸಗಿರುವುದು ಗೊತ್ತಾಗಿದೆ.
ನಗರದ ಸುತ್ತ-ಮುತ್ತ ಒಂದೇ ಭಾರತ್ ರೈಲಿಗೆ ಕಲ್ಲು ಹೊಡೆಯಲಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಬಂದೋಬಸ್ತ್‍ಗಾಗಿ ಈ ಇಬ್ಬರು ಕಾನ್ಸ್‍ಸ್ಟೇಬಲ್‍ಗಳನ್ನು ಬೆಂಗಳೂರಿನಲ್ಲಿ ವಿಶೇಷ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಈ ಮೊದಲು ಚಿಕ್ಕಪೇಟೆಯ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೌನೇಶ್ ಎಂಬಾತ ಸಂಬಳ ಕಡಿಮೆ ಎಂದು ಇತ್ತೀಗಷ್ಟೇ ಕೆಲಸ ಬಿಟ್ಟಿದ್ದ. ಆದರೆ ರಾಯಚೂರಿನಿಂದ ಚಿನ್ನ ಖರೀದಿಗಾಗಿ ಅಬ್ದುಲ್ ರಜಾಕ್ ಮತ್ತು ಮಲ್ಲಯ್ಯ ಅವರು ಬರುತ್ತಿರುವ ಬಗ್ಗೆ ಈತ ವಿಷಯ ತಿಳಿದುಕೊಂಡಿದ್ದನು.
ಈ ವಿಷಯವನ್ನು ಸ್ನೇಹಿತ, ತಮ್ಮ ಊರಿನವರೇ ಆದ, ಕರ್ತವ್ಯಕ್ಕೆ ನಗರದಲ್ಲಿ ನಿಯೋಜನೆಗೊಂಡಿದ್ದ ಈ ಇಬ್ಬರು ಕಾನ್ಸ್‍ಸ್ಟೇಬಲ್‍ಗಳಿಗೆ ತಿಳಿಸಿದ್ದಾನೆ.
ಈ ಆಭರಣಗಳಿಂದ ತಾವು ಅತಿ ಬೇಗ ಶ್ರೀಮಂತರಾಗಬಹುದೆಂದು ತಿಳಿದು ಚಿನ್ನಾಭರಣ ತೆಗೆದುಕೊಂಡು ಬರುವುದನ್ನೇ ಕಾದಿದ್ದ ಈ ಇಬ್ಬರು ಕಾನ್ಸ್‍ಸ್ಟೇಬಲ್‍ಗಳು ಸಮಯ ಸಾಸಿ ತಾವು ಧಿಲೀಸರೆಂದು ಬೆದರಿಸಿ ಅಬ್ದುಲ್ ರಜಾಕ್ ಮತ್ತು ಮಲ್ಲಯ್ಯ ಅವರ ಬಳಿ ಇದ್ದ 1.76 ಕೆಜಿ ತೂಕದ ಚಿನ್ನದ ಗಟ್ಟಿ, 290 ಗ್ರಾಂ ಚಿನ್ನಾಭರಣ, 19 ಸಾವಿರ ನಗದು ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ.
ಉಪ್ಪಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಾದ 48 ಗಂಟೆಗಳಲ್ಲಿ ಸಿಸಿ ಕ್ಯಾಮೆರಾಗಳ ದೃಶ್ಯಾವಳಿ ಆಧರಿಸಿ ಇಬ್ಬರು ಪೊಲೀಸ್ ಕಾನ್ಸ್‍ಸ್ಟೇಬಲ್‍ಗಳು ಸೇರಿದಂತೆ ಮೂವರನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
Police, robbed ,gold, bar, Bangalore,