ಮತದಾರರ ಪಟ್ಟಿ ಹಗರಣ : ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಗಾಗಿ ಶೋಧ

Social Share

ಬೆಂಗಳೂರು, ನ.19- ಚಿಲುಮೆ ಸಂಸ್ಥೆ ವೋಟರ್ ಐಡಿ ಗೋಲ್‍ಮಾಲ ಪ್ರಕರಣದ ವಿಚಾರಣೆಯನ್ನು ತೀವ್ರಗೊಳಿಸಿರುವ ಕೇಂದ್ರ ವಿಭಾಗದ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಸೇರಿದಂತೆ ಇನ್ನಿತರ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಅವರು ಹಲಸೂರು ಗೇಟ್ ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ನಾಲ್ವರನ್ನು ವಶಕ್ಕೆ ಪಡೆದು ಅವರಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಉಳಿದವರಿಗೆ ಕರೆದಾಗ ವಿಚಾರಣೆಗೆ ಬರುವಂತೆ ಸೂಚಿಸಿ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.

ಚಿಲುಮೆ ಸಂಸ್ಥೆಯ ಆಡಳಿತಾಧಿಕಾರಿ ಹಾಗೂ ಮತ್ತೊಬ್ಬ ಪ್ರಮುಖ ಆರೋಪಿ ರವಿಕುಮಾರ್ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್‍ಗೌಡ ಈ ಸಂಜೆಗೆ ತಿಳಿಸಿದ್ದಾರೆ.

ಈಗಾಗಲೆ ವಿಶೇಷ ತಂಡಗಳು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿವೆ ಎಂದು ಅವರು ಹೇಳಿದರು. ಈ ನಡುವೆ ಚಿಲುಮೆ ಸಂಸ್ಥೆಯ ನಿರ್ದೇಶಕಿ ಸೇರಿದಂತೆ ಇಬ್ಬರು ಮಹಿಳೆಯರನ್ನು ಪೊಲೀಸರು ವಿಚಾರಣೆ ನಡೆಸಿ ಕೆಲವು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮತದಾರರ ವೈಯಕ್ತಿಕ ಮಾಹಿತಿ ಕಳುವಿನ ಬಗ್ಗೆ ದಾಖಲೆ ಸಿಕ್ಕಿಲ್ಲ: ತುಷಾರ್ ಗಿರಿನಾಥ್

ಚಿಲುಮೆ ಸಂಸ್ಥೆ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿರುವ ಕಂಪ್ಯೂಟರ್ ಮತ್ತಿತರ ವಸ್ತುಗಳ ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ. ಅವಶ್ಯಕತೆ ಬಿದ್ದರೆ ಮತ್ತೆ ಸಂಸ್ಥೆ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ.

ಅದೇ ರೀತಿ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಆಧಾರದ ಮೇಲೆ ಚಿಲುಮೆ ಸಂಸ್ಥೆಯ ಲೋಕೇಶ್ ಎಂಬಾತನ ಬಂಧನಕ್ಕೆ ಬಲೆ ಬೀಸಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಲೋಕೇಶ್ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೂ ಒಂದು ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ.

ಬಿಬಿಎಂಪಿಗೂ ನೋಟಿಸ್: ಮತದಾರರ ವೈಯಕ್ತಿಕ ಮಾಹಿತಿ ಕಳ್ಳತನ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಬಿಬಿಎಂಪಿ ಅಧಿಕಾರಿಗಳಿಗೂ ನೋಟಿಸ್ ಜಾರಿ ಮಾಡಿ ತನಿಖೆಗೆ ಅವಶ್ಯಕತೆ ಇರುವ ಮಾಹಿತಿ ಕಲೆ ಹಾಕಲು ತೀರ್ಮಾನಿಸಿದ್ದಾರೆ.

ಚಿಲುಮೆ ಸಂಸ್ಥೆಗೆ ಸ್ವೀಪ್ ಕಾರ್ಯಕ್ರಮ ಅನುಷ್ಠಾನಗೊಳಿಸಲು ಅನುಮತಿ ನೀಡಿದ್ದು ಯಾವಾಗ, ಎಷ್ಟು ವರ್ಷದಿಂದ ಅವರು ಈ ಕಾರ್ಯ ಮಾಡುತ್ತಿದ್ದಾರೆ. ಅವರು ಮಾಡಬೇಕಾಗಿದ್ದ ಕೆಲಸವೇನು? ಆ ಸಂಸ್ಥೆಯವರು ಯಾವ ಬ್ಯಾಂಕ್ ಖಾತೆಯಿಂದ ಹಣಕಾಸು ನಿರ್ವಹಣೆ ಮಾಡುತ್ತಿದ್ದರು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಬಿಬಿಎಂಪಿಯವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಲಿದ್ದಾರೆ.

ಬೆಂಗಳೂರಿನ ವಾಹನ ಸವಾರರೇ ಇಲ್ಲಿ ಗಮನಿಸಿ

ನೋಟಿಸ್‍ಗೆ ಬಿಬಿಎಂಪಿಯವರು ಉತ್ತರ ನೀಡಿದ ನಂತರ ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಿ ಆದಷ್ಟು ಬೇಗ ಪ್ರಕರಣವನ್ನು ಬೇಸಲಾಗುವುದು ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Articles You Might Like

Share This Article