ಬೆಂಗಳೂರು,ಆ.23- ಗೌರಿ-ಗಣೇಶ ಹಬ್ಬ ಸಮೀಪಿಸು ತ್ತಿರುವ ಹಿನ್ನೆಲೆಯಲ್ಲಿ ನಗರಾದ್ಯಂತ ಪೊಲೀಸರು ಅಲರ್ಟ್ ಆಗಿದ್ದಾರೆ.
ಗಣೇಶೋತ್ಸವ ಆಚರಣೆ ಸಂಬಂಧ ಶೀಘ್ರದಲ್ಲಿ ನಗರ ಪೊಲೀಸ್ ಆಯುಕ್ತರು ಮತ್ತು ಬಿಬಿಎಂಪಿ ಆಯುಕ್ತರು ಜೊತೆಗೂಡಿ ಸಭೆ ನಡೆಸಿ ಚರ್ಚೆ ನಡೆಸಲಿದ್ದಾರೆ.
ನಗರದ ಎಲ್ಲ ಧಾರ್ಮಿಕ ಮುಖಂಡರು ಹಾಗೂ ಹಿಂದೂಪರ ಸಂಘಟನೆಗಳ ಜೊತೆ ಇನ್ನೆರಡು ದಿನಗಳಲ್ಲಿ ಆಯುಕ್ತರುಗಳು ಸಭೆ ನಡೆಸಲಿದ್ದಾರೆ. ಗಣೇಶೋತ್ಸವ ಆಚರಣೆ ಸಂಬಂಧ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಸಲಹೆ ಸೂಚನೆ ನೀಡಲಿದ್ದಾರೆ.
ಬಿಬಿಎಂಪಿ ಈಗಾಗಲೇ ಕೆಲವು ನಿರ್ಧಾರಗಳನ್ನು ಕೈಗೊಂಡಿದ್ದು, ಪೊಲೀಸರು ಸಹ ಕಟ್ಟೆಚ್ಚರ ವಹಿಸಿದ್ದಾರೆ.
ಈಗಾಗಲೇ ಬೆಂಗಳೂರು ಪೊಲೀಸರು ಆಯಾಯ ಠಾಣೆ ವ್ಯಾಪ್ತಿಗಳಲ್ಲಿ ಸ್ಥಳೀಯ ಮುಖಂಡರನ್ನು ಭೇಟಿ ಮಾಡಿ ಗಣೇಶ ಪ್ರತಿಷ್ಠಾಪನೆ ಸಂಬಂಧ ಮಾಹಿತಿ ಪಡೆದುಕೊಂಡಿದ್ದಾರೆ.
ಯಾವ ಯಾವ ಏರಿಯಾಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ, ಎಷ್ಟು ದಿನದ ನಂತರ ವಿಸರ್ಜಿಸಲಾಗುತ್ತದೆ. ಯಾವ ಮಾರ್ಗದಲ್ಲಿ ಮೆರವಣಿಗೆ ಮಾಡಲಾಗುತ್ತದೆ ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ.
ಗಣೇಶ ಹಬ್ಬ ಹಾಗೂ ಮೆರವಣಿಗೆ ಮತ್ತು ವಿಸರ್ಜನೆ ಸಂದರ್ಭಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿಕೊಳ್ಳುತ್ತಿದ್ದಾರೆ.