ಬೆಂಗಳೂರು, ಆ.30- ಗಣೇಶೋತ್ಸವದ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶವಾದ ಚಾಮರಾಜಪೇಟೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಚಾಮರಾಜ ಪೇಟೆಯ ಹಲವು ಗಲ್ಲಿಗಳಲ್ಲಿ, ವಿವಿಧ ಬಡಾವಣೆಗಳಲ್ಲಿ ಗಣೇಶೋತ್ಸವವನ್ನು ಆಚರಿಸಲಾಗುತ್ತಿದ್ದು, ಅಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹದ್ದಿನ ಕಣ್ಣಿಡಲಾಗಿದೆ.
ಸಾರ್ವಜನಿಕ ಗಣೇಶೋತ್ಸವಕ್ಕೆ ಈಗಾಗಲೇ ಪೊಲೀಸ್ ಇಲಾಖೆ ನೀಡಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದ್ದು, ಅನುಮತಿ ಪಡೆದ ಸಂಘ-ಸಂಸ್ಥೆಗಳಿಗೆ ಭದ್ರತೆಯನ್ನು ಕಲ್ಪಿಸಲಾಗುತ್ತಿದೆ.
ಧ್ವನಿವರ್ಧಕಗಳ ಬಳಕೆ, ಆರ್ಕೆಸ್ಟ್ರಾ, ಸಾಂಸ್ಕøತಿಕ ಕಾರ್ಯಕ್ರಮ ನಂತರ ಸಂಜೆ ವೇಳೆಗೆ ಮೆರವಣಿಗೆ ಸೇರಿದಂತೆ ಎಲ್ಲೆಡೆ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ. ಯಾವುದೇ ರೀತಿಯ ಕಾನೂನಿಗೆ ಭಂಗ ಉಂಟು ಮಾಡುವವರನ್ನು ಮೂಲಾಜಿಲ್ಲದೆ ಬಂಧಿಸಲು ಸೂಚನೆ ನೀಡಲಾಗಿದೆ.
ಭದ್ರತೆ ಉಸ್ತುವಾರಿಯನ್ನು ಮೂವರು ಡಿಸಿಪಿಗಳು ವಹಿಸಲಿದ್ದು, ಇದರ ಜೊತೆಗೆ ಹದ್ದಿನ ಕಣ್ಣಿಡಲು 21 ಎಸಿಪಿ, 47 ಇನ್‍ಸ್ಪೆಕ್ಟರ್‍ಗಳು, 130 ಪೊಲೀಸ್ ಸಬ್‍ಇನ್‍ಸ್ಪೆಕ್ಟರ್‍ಗಳು, 126 ಸಹಾಯಕ ಸಬ್‍ಇನ್‍ಸ್ಪೆಕ್ಟರ್‍ಗಳು, 900 ಹೆಡ್‍ಕಾನ್‍ಸ್ಟೇಬಲ್‍ಗಳನ್ನು ನಿಯೋಜಿಸಲಾಗಿದೆ.
ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತನ್ನು ಕೂಡ ಹೆಚ್ಚಿಸಲಾಗಿದ್ದು, ಒಟ್ಟಾರೆ ಗಣೇಶ ಉತ್ಸವ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.