ಬೆಂಗಳೂರು,ಜ.20- ಮಹಿಳೆಯೊಬ್ಬರಿಗೆ ಹೆಣ್ಣೂರು ಠಾಣೆ ಇನ್ಸ್ಪೆಕ್ಟರ್ ವಸಂತ್ಕುಮಾರ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಕೆಜಿ ಹಳ್ಳಿ ಉಪವಿಭಾಗದ ಎಸಿಪಿ ಜಗದೀಶ ಅವರಿಗೆ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.
ಘಟನೆ ಸಂಬಂಧ ನಿನ್ನೆ ಮಹಿಳೆ ಆಯುಕ್ತರ ಕಚೇರಿಗೆ ತೆರಳಿ ಇನ್ಸ್ಪೆಕ್ಟರ್ ವಿರುದ್ಧ ಆರೋಪ ಮಾಡಿ ದೂರು ನೀಡಿದ್ದರು. ಅಲ್ಲದೆ ಮಾಧ್ಯಮಗಳ ಮುಂದೆಯೂ ತನಗಾದ ಅನ್ಯಾಯದ ಬಗ್ಗೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಸಂಪೂರ್ಣ ವರದಿ ನೀಡುವಂತೆ ಆಯುಕ್ತರಾದ ಕಮಲ್ ಪಂತ್ ಅವರು ಎಸಿಪಿಗೆ ಆದೇಶಿಸಿದ್ದಾರೆ.
# ಘಟನೆ ಹಿನ್ನೆಲೆ:
ಬಾಣಸವಾಡಿ ನಿವಾಸಿಯಾದ ಸಂತ್ರಸ್ಥೆ ಒಂದೂವರೆ ವರ್ಷದ ಹಿಂದೆ ತಮ್ಮ ಮನೆಯ ಒಂದು ಮಹಡಿಯನ್ನು ಸುಮತಿ-ವರಲಕ್ಷ್ಮೀ ಸಹೋದರಿಯರಿಗೆ ನೀಡಿದ್ದರು.ಆದರೆ ಒಂದು ವರ್ಷದಿಂದ ನೀರಿನ ಬಿಲ್ ಕಟ್ಟದಿದ್ದಾಗ ಇತ್ತೀಚೆಗೆ ಸಂತ್ರಸ್ಥೆ ಈ ಬಗ್ಗೆ ಪ್ರಶ್ನಿಸಿದಾಗ ಬಾಡಿಗೆದಾರರು ಜಗಳ ಮಾಡಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೆಣ್ಣೂರು ಪೊಲೀಸ್ ಠಾಣೆಗೆ ತೆರಳಿದಾಗ ಇನ್ಸ್ಪೆಕ್ಟರ್ ದೂರು ಪಡೆದುಕೊಳ್ಳದೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸಂತ್ರಸ್ಥೆ ದೂರಿನಲ್ಲಿ ಆರೋಪಿಸಿದ್ದಾರೆ. ಇನ್ಸ್ಪೆಕ್ಟರ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಂತ್ರಸ್ಥ ಮಹಿಳೆ ಆಯುಕ್ತರಿಗೆ ಮನವಿ ಮಾಡಿದ್ದಾರೆ.
