ಪೊಲೀಸ್ ವೇಷಧರಿಸಿ 80 ಲಕ್ಷ ಸುಲಿಗೆ ಮಾಡಿದ್ದ ಮೂವರ ಬಂಧನ

Social Share

ಬೆಂಗಳೂರು, ಜ.28- ಅಡಿಕೆ ವ್ಯವಹಾರಕ್ಕೆ ಸಂಬಂಧಿಸಿದ ಹಣವನ್ನು ತೆಗೆದುಕೊಂಡು ಕಾರಿನಲ್ಲಿ ಹೋಗುತ್ತಿದ್ದಾಗ ಮಾರ್ಗಮಧ್ಯೆ ಕಾರನ್ನು ಅಡ್ಡಗಟ್ಟಿ ಪೊಲೀಸ್ ಎಂದು ಹೇಳಿ ಬೆದರಿಸಿ 80 ಲಕ್ಷ ಹಣ ಸುಲಿಗೆ ಮಾಡಿ ಪರಾರಿಯಾಗಿದ್ದ ಅಂತರ್‍ರಾಜ್ಯ ಇಬ್ಬರು ಸ್ಮಗ್ಲರ್‍ಗಳು ಸೇರಿ ಮೂವರನ್ನು ವಿಲ್ಸನ್‍ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ರಾಜ್ಯದ ಕಡಪ ಜಿಲ್ಲೆಯ ಭತಲ್ ಶಿವರಾಮ್ ಕೃಷ್ಣ ಯಾದವ್ ಅಲಿಯಾಸ್ ಗಲ್ಲಿ ರೌಡಿ(19)ಹಾಗೂ ತಿರುಪತಿಯ ಸ್ಪೆಷಲ್ ಸಬ್ ಜೈಲಿನಲ್ಲಿದ್ದ ಸಹೋದರರಾದ ಶೇಖ್ ಚೆಂಪತಿ ಲಾಲ್ ಬಾಷ(36),
ಶೇಖ್ ಚೆಂಪತಿ ಜಾಕೀರ್(27) ಬಂಧಿತ ಆರೋಪಿಗಳು.

ಆರೋಪಿಗಳು ಸುಲಿಗೆ ಮಾಡಿದ್ದ ಹಣದಲ್ಲಿ ಜೂಜಾಟವಾಡಿ ಹಣ ಕಳೆದುಕೊಂಡಿರುವುದಾಗಿ ತಿಳಿಸಿದ್ದು, ಉಳಿದ 37 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂತರ್‍ರಾಜ್ಯ ಸುಲಿಗೆಕೋರರಾದ ಶೇಖ್ ಚೆಂಪತಿ ಲಾಲ್ ಬಾಷ ಮತ್ತು ಶೇಖ್ ಚೆಂಪತಿ ಜಾಕೀರ್ ಸಹೋದರರಾಗಿದ್ದು, ಶೇಖ್ ಚೆಂಪತಿ ವಿರುದ್ಧ 54 ಪ್ರಕರಣಗಳು ಹಾಗೂ ಶೇಖ್ ಚೆಂಪತಿ ಜಾಕೀರ್ ವಿರುದ್ಧ 33 ಪ್ರಕರಣಗಳು ಆಂಧ್ರಪ್ರದೇಶ ರಾಜ್ಯದಲ್ಲಿ ದಾಖಲಾಗಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ.

ಭಾರತದಲ್ಲಿ ವಿವಾದ ಸೃಷ್ಟಿಸಿದ ಬಿಬಿಸಿ ಸಾಕ್ಷ್ಯ ಚಿತ್ರಗಳ ಸರಣಿ

ಘಟನೆ ವಿವರ:
ಕಳೆದ ಡಿ. 27ರಂದು ಮಧ್ಯಾಹ್ನ 1.30ರ ಸುಮಾರಿನಲ್ಲಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿ ನಗರ ಬಸ್ ನಿಲ್ದಾಣದ ಹತ್ತಿರ ಕೆಎಚ್ ರಸ್ತೆ ಸಿಗ್ನಲ್ ಬಳಿ ಪಿರ್ಯಾದುದಾರರು ತನ್ನ ಮಾಲೀಕರ ಅಡಿಕೆ ವ್ಯವಹಾರಕ್ಕೆ ಸಂಬಂಧಿಸಿದ 80 ಲಕ್ಷ ಹಣವನ್ನು ಕಾರಿನಲ್ಲಿ ತುಮಕೂರಿನಿಂದ ತಮಿಳುನಾಡಿಗೆ ತೆಗೆದುಕೊಂಡು ಹೋಗುತ್ತಿದ್ದರು.

ಆ ಸಂದರ್ಭದಲ್ಲಿ ಸ್ವಿಪ್ಟ್ ಡಿಜೈರ್ ಕಾರಿನಲ್ಲಿ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಇವರ ಕಾರನ್ನು ಹಿಂಬಾಲಿಸಿಕೊಂಡು ದರೋಡೆಕೋರರು ಬಂದಿದ್ದಾರೆ. ಕಾರಿನಲ್ಲಿ ಒಬ್ಬ ಪಿಎಸ್‍ಐ ಪೊಲೀಸ್ ಸಮವಸ್ತ್ರ ಧರಿಸಿದ್ದರೆ, ಕಾರಿನ ಮುಂಭಾಗದಲ್ಲಿ ಪೊಲೀಸ್ ಎಂದು ಬೋರ್ಡ್ ಹಾಕಿಕೊಂಡು ರಿವೋಲಿ ಜಂಕ್ಷನ್ ಬಳಿ ಟ್ರಾಫಿಕ್ ಸಿಗ್ನಲ್ ಬಿದ್ದಾಗ ಏಕಾಏಕಿ ಕಾರಿನಿಂದ ಇಳಿದು ಪಿರ್ಯಾದುದಾರರ ಕಾರಿನ ಬಳಿ ಬಂದು ಅವರಿಗೆ ಮತ್ತು ಅವರೊಂದಿಗಿದ್ದ ಮತ್ತೊಬ್ಬ ವ್ಯಕ್ತಿಗೆ ಹಲ್ಲೆ ಮಾಡಿ ಅದೇ ಕಾರಿನಲ್ಲಿ ಕುಳಿತುಕೊಂಡು ಸ್ವಲ್ಪ ದೂರ ಅಪಹರಣ ಮಾಡಿಕೊಂಡು ಹೋಗಿದ್ದಾರೆ.

ಪಿರ್ಯಾದಿಗೆ ನಾವು ಪೊಲೀಸರೆಂದು ಹೆದರಿಸಿ ಕಾರಿನಲ್ಲಿ ಎರಡು ಬ್ಯಾಗ್‍ನಲ್ಲಿದ್ದ 80 ಲಕ್ಷ ಹಣ ಮತ್ತು ಕಾರಿನ ಕೀ ತೆಗೆದುಕೊಂಡು ಕಾರನ್ನು ಅಲ್ಲೇ ಬಿಟ್ಟು ತಾವು ಬಂದಿದ್ದ ಕಾರಿನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಪಿರ್ಯಾದುದಾರರು ವಿಲ್ಸನ್‍ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಹಲವು ಸಾಕ್ಷ್ಯದಾರಗಳನ್ನು ಸಂಗ್ರಹಿಸಿದರು.

ಕಿತ್ತೂರು ಕರ್ನಾಟಕ ಬಿಜೆಪಿಯ ಭದ್ರಕೋಟೆ : ಸಿಎಂ ಬೊಮ್ಮಾಯಿ

ಲಭ್ಯವಾದ ಸಾಕ್ಷ್ಯದಾರರಗಳ ಮೇರೆಗೆ ಆಂಧ್ರ ಪ್ರದೇಶದ ಭತಲ್ ಶಿವರಾಮ್ ಕೃಷ್ಣ ಯಾದವ್‍ನನ್ನು ವಿಚಾರಣೆಗೊಳಪಡಿಸಿದಾಗ ಇನ್ನಿಬ್ಬರ ಹೆಸರನ್ನು ಬಾಯ್ಬಿಟ್ಟಿದ್ದಾನೆ. ಆರೋಪಿಯ ಮಾಹಿತಿ ಮೇರೆಗೆ ರಕ್ತ ಚಂದನ ಅಕ್ರಮ ಸಾಗಾಟಾದ ಪ್ರಕರಣದಲ್ಲಿ ಆಂಧ್ರ ಪ್ರದೇಶದ ತಿರುಪತಿಯಲ್ಲಿರುವ ಸ್ಪೆಷಲ್ ಸಬ್ ಜೈಲಿನಲ್ಲಿದ್ದ ಇನ್ನಿಬ್ಬರನ್ನು ಪೊಲೀಸ್ ಬಂಧನಕ್ಕೆ ಪಡೆದು ವಿಚಾರಣೆಗೊಳಪಡಿಸಿ 37 ಲಕ್ಷ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಯಶಸ್ವಿಯಾಗಿರುತ್ತಾರೆ.

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿಯು ತಲೆಮರೆಸಿಕೊಂಡಿದ್ದು ಆತನ ಪತ್ತೆ ಕಾರ್ಯ ಮುಂದುವರೆದಿದೆ. ಆರೋಪಿಗಳನ್ನು ಪತ್ತೆ ಮಾಡಿ, ಬಂಧಿಸಿ, ಸುಲಿಗೆ ಮಾಡಿದ್ದ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಕೇಂದ್ರ ವಿಭಾಗದ ಉಪಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ, ಹಲಸೂರು ಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಾರಾಯಣ ಸ್ವಾಮಿ ಅವರ ಮಾರ್ಗದರ್ಶನದಲ್ಲಿ, ವಿಲ್ಸನ್ ಗಾರ್ಡನ್ ಠಾಣೆ ಇನ್ಸ್‍ಪೆಕ್ಟರ್ ರಾಜು ಅವರ ನೇತೃತ್ವದ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

Police uniform, 80 lakhs, Robbery, three Arrest,

Articles You Might Like

Share This Article