ಮೈಸೂರು, ಫೆ.17- ಮದ್ಯದ ಅಮಲಿನಲ್ಲಿ ದ್ವಿಚಕ್ರ ವಾಹನ ಸವಾರ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ಮೈಸೂರು- ಹುಣಸೂರು ರಸ್ತೆಯ ಜಲದರ್ಶಿನಿ ಬಳಿ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರವಾಹನ ಪೊಲೀಸ್ ವ್ಯಾನ್ ಕೆಳಗೆ ಸಿಲುಕಿಕೊಂಡಿದೆ. ಅದೃಷ್ಟವಶಾತ್ ವಾಹನ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಗರದಿಂದ ಹುಣಸೂರು ರಸ್ತೆ ಮೂಲಕ ತೆರಳುತ್ತಿದ್ದ ಸಿಎಆರ್ ಪೊಲೀಸ್ ವಾಹನ ಜಲದರ್ಶಿನಿಗೆ ಪ್ರವೇಶಿಸಲು ಮುಂದಾಗಿದೆ. ಇದೇ ವೇಳೆ ದ್ವಿಚಕ್ರವಾಹನ ಸವಾರ ಮೊಬೈಲ್‍ನಲ್ಲಿ ಮಾತನಾಡುತ್ತಾ ಬರುತ್ತಿದ್ದನೆಂದು ಹೇಳಲಾಗಿದ್ದು ನಿಯಂತ್ರಣ ತಪ್ಪಿ ಸಿಎಆರ್ ವ್ಯಾನ್ ಗೆ ಡಿಕ್ಕಿ ಹೊಡೆದಿದ್ದಾನೆ.
ದ್ವಿಚಕ್ರವಾಹನ ಸವಾರ ಪಾನಮತ್ತನಾಗಿದ್ದನೆಂದು ಸ್ಥಳೀಯರು ಆರೋಪಿಸಿದ್ದಾರೆ. ದ್ವಿಚಕ್ರವಾಹನ ಸವಾರನನ್ನು ವಿವಿ ಪುರಂ ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
