ನವದೆಹಲಿ,ಮಾ.3- ಉಕ್ರೇನ್ಗೆ ವಿದ್ಯಾಭ್ಯಾಸಕ್ಕೆ ತೆರಳಿ ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ ಬರುತ್ತಿರುವ ಭಾರತೀಯ ವಿದ್ಯಾರ್ಥಿಗಳಲ್ಲಿನ ಭವಿಷ್ಯದ ಗೊಂದಲಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಯುದ್ಧಪೀಡಿತ ಉಕ್ರೇನ್ನಲ್ಲಿ ಉಳಿಯಲಾಗದೆ ಭಾರತೀಯ ವಿದ್ಯಾರ್ಥಿಗಳು ಆಪರೇಷನ್ ಗಂಗಾಕಾರ್ಯಾಚರಣೆ ಮೂಲಕ ಭಾರತಕ್ಕೆ ಮರಳುತ್ತಿದ್ದಾರೆ.
ಆದರೆ, ಇವರಲ್ಲಿ ಭವಿಷ್ಯದ ಆತಂಕ ತೀವ್ರವಾಗಿ ಕಾಡಲಾರಂಭಿಸಿದೆ. ಲಕ್ಷಾಂತರ ಹಣ ಕೊಟ್ಟು ಎಂಬಿಬಿಎಸ್ ಹಾಗೂ ಇತರೆ ಶಿಕ್ಷಣ ಪಡೆಯಲು ಉಕ್ರೇನ್ಗೆ ತೆರಳಿದ್ದರು. ಅನಿರೀಕ್ಷಿತವಾಗಿ ಎದುರಾದ ಯುದ್ಧದಿಂದ ದೇಶ ತೊರೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಇತ್ತ ವಿದ್ಯಾಭ್ಯಾಸವೂ ಪೂರ್ಣಗೊಂಡಿಲ್ಲ. ಹಣ ಕೂಡ ವಾಪಸ್ ಬರುವುದಿಲ್ಲ ಎಂಬ ಆತಂಕ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಭವಿಷ್ಯದ ಕಾರ್ಮೋಡ ಆವರಿಸಿದೆ.
ಈಗಾಗಲೇ ಮೂರ್ನಾಲ್ಕು ವರ್ಷ ಓದಿನಲ್ಲೇ ವ್ಯಯವಾಗಿದೆ. ಈಗ ಮತ್ತೆ ಹೊಸದಾಗಿ ಓದಬೇಕಾಗಬಹುದೇನೋ ಎಂಬ ಗೊಂದಲೂ ಇದೆ. ವಿದ್ಯಾರ್ಥಿಗಳ ಸ್ಥಳಾಂತರ ಕಾರ್ಯಾಚರಣೆಗಾಗಿ ಉಕ್ರೇನ್ನ ನೆರೆಯ ರಾಷ್ಟ್ರ ಪೋಲೆಂಡ್ನಲ್ಲಿ ಬೀಡು ಬಿಟ್ಟಿರುವ ಕೇಂದ್ರ ಭೂ ಸಾರಿಗೆ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವ ಜನರಲ್ ವಿ.ಕೆ.ಸಿಂಗ್ ಅವರು ಪೋಲೆಂಡ್ ಸರ್ಕಾರದ ಜತೆ ಮಾತುಕತೆ ನಡೆಸಿದ್ದು, ಆಶಾದಾಯಕ ಭರವಸೆ ಸಿಕ್ಕಿದೆ.
ಉಕ್ರೇನ್ನಲ್ಲಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪೋಲೆಂಡ್ ವಿಶ್ವವಿದ್ಯಾಲಯಗಳು ಕೋರ್ಸ್ಗಳನ್ನು ಮುಂದುವರೆಸಲು ಅವಕಾಶ ಮಾಡಿಕೊಡುವ ಭರವಸೆ ನೀಡಿವೆ ಎಂದು ವಿ.ಕೆ.ಸಿಂಗ್ ತಿಳಿಸಿದ್ದಾರೆ. ಇದು ಮುಳುಗುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಕನಸಿಗೆ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
