ಗಿಫ್ಟ್ ಹಿಡಿದು ಮನವೊಲಿಸಲು ಬಂದ ಜನಪ್ರತಿನಿಗಳ ವಿರುದ್ಧ ಆಕ್ರೋಶ

Social Share

ಬೆಂಗಳೂರು, ಮಾ.16- ಕಳೆದ ಐದು ವರ್ಷಗಳಿಂದ ತಮ್ಮ ಸಮಸ್ಯೆಗಳಿಗೆ ಕಿವಿಕೊಡದೆ ಕಣ್ಣುಮುಚ್ಚಿ ಕುಳಿತು, ಚುನಾವಣೆ ಬಂದ ಕೂಡಲೇ ಉಡುಗೊರೆ ನೀಡಲು ಮುಂದಾದ ಜನಪ್ರತಿನಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಈ ಚುನಾವಣೆಯ ವಿಶೇಷವಾಗಿದೆ.

ಸೀರೆಗಳಿಗೆ ಬೆಂಕಿ ಹಚ್ಚಿದ ಯುವಕ, ಸ್ಥಳೀಯ ಶಾಸಕರು ತಮ್ಮ ಕ್ಷೇತ್ರದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ತಲೆಕೆಡಿಸಿಕೊಳ್ಳದೆ ಈಗ ಉಡುಗೊರೆಗಳನ್ನು ನೀಡಿ ಆಮಿಷವೊಡ್ಡುತ್ತಿದ್ದಾರೆ ಎಂದು ಅನೇಕರು ತಿರುಗಿ ಬಿದ್ದಿದ್ದಾರೆ.

ಗ್ರಾಮದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ನಮ್ಮ ಕುಂದುಕೊರತೆಗಳನ್ನು ನಿವಾರಿಸಲು ಯಾವುದೇ ಪ್ರಯತ್ನ ಮಾಡಿಲ್ಲ. ಈಗ ಸೀರೆ ಹಂಚುವ ಮೂಲಕ ನಮ್ಮ ಮಹಿಳೆಯರಿಗೆ ಅವಮಾನ ಮಾಡುತ್ತಿದ್ದಾರೆ.
ಸಾಂಕ್ರಾಮಿಕ ರೋಗ ಸಮಯ ದಲ್ಲಿ ನಮಗೆ ಆಹಾರದ ಅಗತ್ಯವಿತ್ತು. ಅಂದು ಒಂದು ಕೆಜಿ ಅಕ್ಕಿ ಕೂಡ ವ್ಯವಸ್ಥೆ ಮಾಡಲಾಗದವರು ಈಗ ಮತ ಭಿಕ್ಷೆಗೆ ಬಂದಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೀರೆ ಕೊಳ್ಳಲಾಗದಷ್ಟು ಬಡವರಲ್ಲ ನಾವು. 100 ರೂ.ಗಿಂತ ಕಡಿಮೆ ಬೆಲೆಯ ಸೀರೆಗೆ ನಮ್ಮ ಮತವನ್ನು ಮಾರಬಹುದೇ? ಎಂದು ಗ್ರಾಮಸ್ಥರೊಬ್ಬರು ಪ್ರಶ್ನಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ.

ಹಾವೇರಿ ಜಿಲ್ಲೆಯ ಬೀರೇಶ್ವರ ನಗರದಲ್ಲಿರುವ ಬಿಜೆಪಿ ಎಂಎಲ್ಸಿ ಆರ್.ಶಂಕರ್ ಅವರ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಅವರ ಹೆಸರು ಹಾಗೂ ಚಿತ್ರಗಳಿರುವ 30ರಿಂದ 40 ಲಕ್ಷ ರೂ. ಮೌಲ್ಯದ ಮನೆ ಸಾಮಗ್ರಿಗಳನ್ನು ವಶಪಡಿಸಿ ಕೊಂಡಿದ್ದಾರೆ.6,000 ಸೀರೆಗಳು, 9,000 ಶಾಲಾ ಬ್ಯಾಗ್ಗಳು, ಸ್ಟೀಲ್ ಪ್ಲೇಟ್ಗಳು ಮತ್ತು ಗ್ಲಾಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಂಎಲ್ಸಿ ಆರ್.ಶಂಕರ್ ಅವರ ಬೆಂಬಲಿಗರು ನಿವಾಸದಲ್ಲಿ ಜಮಾಯಿಸಿ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.ಆಡಳಿತಾರೂಢ ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿ ಶಾಸಕ ಸಿ.ಟಿ. ರವಿ ಅವರು ನೀಡಿದ್ದಾರೆ ಎನ್ನಲಾದ ಸೀರೆಗಳನ್ನು ಮತದಾರರು ಸುಟ್ಟು ಹಾಕಿದ್ದು ಅಭಿವೃದ್ಧಿ ಕುರಿತು ಅವರು ಉತ್ತರ ನೀಡಬೇಕೆಂದು ಒತ್ತಾಯಿಸಿರುವ ಘಟನೆಯೂ ಜರುಗಿವೆ.
ಮತ್ತೊಂದು ಘಟನೆಯಲ್ಲಿ ಬಬಲೇಶ್ವರ ಕ್ಷೇತ್ರದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಎಂ.ಬಿ. ಪಾಟೀಲ್ ಕೂಡ ಸೀರೆ ಮತ್ತು ಪಾತ್ರೆ ಗಳನ್ನು ಹಂಚಿದರು ಎನ್ನಲಾಗಿದೆ. ಅವುಗಳನ್ನು ಗ್ರಾಮಸ್ಥರು ಎಸೆದಿದ್ದಾರೆ.

#PoliticalLeaders, #GiftDrama,

Articles You Might Like

Share This Article