Saturday, April 11, 2026
Homeರಾಜಕೀಯನಾಳೆಯಿಂದ ಪ್ರಚಾರಕ್ಕೆ ಧುಮುಕಲಿರುವ ಘಟಾನುಘಟಿ ನಾಯಕರು, ರಂಗೇರಲಿದೆ ಉಪಚುನಾವಣೆ

ನಾಳೆಯಿಂದ ಪ್ರಚಾರಕ್ಕೆ ಧುಮುಕಲಿರುವ ಘಟಾನುಘಟಿ ನಾಯಕರು, ರಂಗೇರಲಿದೆ ಉಪಚುನಾವಣೆ

Leaders to campaign for by-elections from tomorrow

ಬೆಂಗಳೂರು,ಮಾ.29- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಹಣಾಹಣಿಯಿಂದ ಕೂಡಿರುವ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಾಳೆಯಿಂದ ರಂಗೇರಲಿದ್ದು, ಅಭ್ಯರ್ಥಿಗಳ ಪರವಾಗಿ ಎರಡೂ ಪಕ್ಷಗಳ ಮುಖಂಡರು ಪ್ರಚಾರಕ್ಕೆ ಧುಮಕಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರು, ಶಾಸಕರು, ವಿಧಾನಪರಿಷತ್‌ ಸದಸ್ಯರು, ಪಕ್ಷದ ಮುಖಂಡರು, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವರು.

ಬಿಜೆಪಿ ನಾಯಕರು ಕೂಡ ಪ್ರಚಾರಕ್ಕೆ ಧುಮಕಲಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ ,ಕೇಂದ್ರ ಸಚಿವರಾದ ವಿ.ಸೋಮಣ್ಣ, ಪ್ರತಿಪಕ್ಷದ ನಾಯಕರಾದ ಆರ್‌.ಅಶೋಕ್‌, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಪ್ರಚಾರದ ಪಟ್ಟಿಯಲ್ಲಿರುವವರು ಅಭ್ಯರ್ಥಿಗಳ ಪರ ಮತಯಾಚನೆ ಮಾಡುವರು.

ಸಿಎಂ ಸಿದ್ದರಾಮಯ್ಯ ಅವರು ಬಾಗಲಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಅಭ್ಯರ್ಥಿ ಉಮೇಶ್‌ ಮೇಟಿ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಹಲವಾರು ಗ್ರಾಮಗಳಿಗೆ ಭೇಟಿ ನೀಡಲಿರುವ ಅವರು, ಉಪಚುನಾವಣೆಯಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮತದಾರರಿಗೆ ಮನವಿ ಮಾಡುವರು.

ಎರಡು ದಿನಗಳ ಕಾಲ ಬಾಗಲಕೋಟೆಯಲ್ಲಿ ವಾಸ್ತವ್ಯ ಹೂಡಲಿರುವ ಸಿಎಂ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮಾಪುರ, ಶಾಸಕರು, ವಿಧಾನಪರಿಷತ್‌ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಸಾಥ್‌ ನೀಡಲಿದ್ದಾರೆ.

ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ.ಟಿ ದಾಸ ಕರಿಯಪ್ಪ ಪರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತಯಾಚನೆ ಮಾಡಲಿದ್ದಾರೆ. ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಈ ಚುನಾವಣೆಯನ್ನು ಶತಾಯಗತಾಯ ಗೆಲ್ಲಲ್ಲೇಬೇಕೆಂದು ಪಣ ತೊಟ್ಟಿದ್ದಾರೆ.
ರಾಜ್ಯಾಧ್ಯಕ್ಷರಿಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಪ್ರಮುಖರಾದ ರಾಮಚಂದ್ರ, ಮಾಜಿ ಸಂಸದ ಜಿ.ಎಂ.ಸಿದ್ದೇಶ್‌, ಗಾಯತ್ರಿ ಸಿದ್ದೇಶ್‌, ಮಾಡಾಳು ವಿರೂಪಾಕ್ಷಪ್ಪ ಸೇರಿದಂತೆ ಮತ್ತಿತರರು ಜೊತೆ ಇರಲಿದ್ದಾರೆ.

ಕಾಂಗ್ರೆಸ್‌‍ ಅಭ್ಯರ್ಥಿ ಸಮರ್ಥ.ಎಸ್‌‍.ಎಸ್‌‍. ಪರವಾಗಿ ಸಚಿವ ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌ ಸೇರಿದಂತೆ ಹಲವರು ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಹಾಗೂ ಶಾಸಕರು ಸೇರಿದಂತೆ ಹಲವರು ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಲಿದ್ದಾರೆ.

ಮತಯಾಚನೆ ವೇಳೆ ಈಗಾಗಲೇ ಆರೋಪ-ಪ್ರತ್ಯಾರೋಪ ಕೇಳಿಬಂದಿದೆ. ಶನಿವಾರಷ್ಟೇ ದಾವಣಗೆರೆಗೆ ತೆರಳಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ದೊಡ್ಡ ಮಾತಿನ ಚಕಮಕಿ ನಡೆದಿತ್ತು.

ಬಿಜೆಪಿ ಸವಾಲು ಸ್ವೀಕರಿಸಿ ಪಕ್ಷದ ಕಚೇರಿ ಬಳಿ ಬಂದಿದ್ದ ಪ್ರದೀಪ್‌ ಈಶ್ವರ್‌ಗೆ ಪೊರಕೆ, ಚಪ್ಪಲಿಯನ್ನು ತೋರಿಸಲಾಗಿತ್ತು. ಬರುವ ದಿನಗಳಲ್ಲಿ ಇದು ಇನ್ನಷ್ಟು ತಾರಕಕ್ಕೇರುವ ಸಂಭವವಿದೆ.

RELATED ARTICLES

Latest News