ಬೆಂಗಳೂರು,ಅ.11- ವಿಧಾನಸಭೆಯ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಜಿದ್ದಿಗೆ ಬಿದ್ದಂತೆ ಯಾತ್ರೆ ಮೇಲೆ ಯಾತ್ರೆ ಕೈಗೊಳ್ಳುತ್ತಿದ್ದು, ಜನಸಾಮಾನ್ಯರು ಬೇಸತ್ತು ಹೋಗುವಂತಾಗಿದೆ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3570 ಕಿ.ಮೀ ಪಾದಯಾತ್ರೆ ನಡೆಯುತ್ತಿದೆ.
ಸೆ.30ಕ್ಕೆ ರಾಜ್ಯ ಪ್ರವೇಶಿಸಿದ ಈ ಯಾತ್ರೆ 500 ಕಿ.ಮೀಗೂ ಹೆಚ್ಚು ದೂರ ರಾಜ್ಯದಲ್ಲಿ 21 ದಿನಗಳ ಕಾಲ ಸಂಚರಿಸಲಿದೆ. ಬೆಂಗಳೂರು ಹೊರತುಪಡಿಸಿ ಬಹುತೇಕ ಸರಳರೇಖೆ ಮಾದರಿಯಲ್ಲಿ ಯಾತ್ರೆ ನಡೆಯುತ್ತಿರುವುದರಿಂದ ನಗರ ಪ್ರದೇಶಗಳ ದಟ್ಟಣೆಗೆ ಧಕ್ಕೆಯಾಗುತ್ತಿಲ್ಲ.
ಇದರ ನಡುವೆ ರಾಹುಲ್ ಗಾಂಧಿ ಯಾತ್ರೆಗೆ ತಿರುಗೇಟು ನೀಡಲು ಬಿಜೆಪಿ ಸಂಕಲ್ಪ ಯಾತ್ರೆಯನ್ನು ಆರಂಭಿಸಿದೆ. ಮುಖ್ಯಮಂತ್ರಿ ಸೇರಿದಂತೆ ಸಂಪುಟದ ಸಚಿವರು, ಪ್ರಭಾವಿ ನಾಯಕರು ತಂಡೋಪತಂಡವಾಗಿ ರಾಜ್ಯದ ಮೂಲೆ ಮೂಲೆಯಲ್ಲೂ ರಾಜ್ಯದ ಮೂಲೆ ಮೂಲೆಯಲ್ಲೂ ಸಂಚರಿಸಲಿದ್ದಾರೆ.
ಈ ಯಾತ್ರೆ ಮುಗಿಯುವ ಮುನ್ನವೇ ಕಾಂಗ್ರೆಸ್ ಮತ್ತೊಂದು ರಥಯಾತ್ರೆಗೆ ಚಾಲನೆ ನೀಡಲಿದೆ. ಭಾರತ ಐಕ್ಯತಾ ಯಾತ್ರೆ ಮುಗಿದ ಬಳಿಕ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ವರು ಪ್ರತ್ಯೇಕ ತಂಡಗಳಾಗಿ ರಾಜ್ಯದ ನಾನಾ ಭಾಗಗಳಲ್ಲಿ ರಥಯಾತ್ರೆ ನಡೆಸಲಿದ್ದಾರೆ.
ಈ ನಡುವೆ ಜೆಡಿಎಸ್ ನ.1ರಿಂದ ಪಂಚರತ್ನ ಯಾತ್ರೆ ಹಮ್ಮಿಕೊಂಡಿದೆ. ಇದು ಕೂಡ ಸಾಕಷ್ಟು ಹವಾ ಸೃಷ್ಟಿಸುತ್ತಿದೆ. ರಾಜಕೀಯ ಪಕ್ಷಗಳು ನಾ ಮುಂದು, ತಾಮುಂದು ಎಂದು ಯಾತ್ರೆ, ಸಮಾವೇಶಗಳನ್ನು ಆಯೋಜಿಸುತ್ತಿವೆ.
ಅಕ್ಟೋಬರ್ ಹಬ್ಬಗಳ ತಿಂಗಳಾಗಿದ್ದು, ಜನಸಾಮಾನ್ಯರು ರಾಜಕೀಯದ ಗೋಜೇ ಬೇಡ ಎಂದು ಸಂಭ್ರಮದಲ್ಲಿ ಕಾಲ ಕಳೆಯುತ್ತಾರೆ. ನವೆಂಬರ್, ಡಿಸೆಂಬರ್, ಜನವರಿನಲ್ಲಿ ಗ್ರಾಮೀಣ ಭಾಗದಲ್ಲಿ ಕೃಷಿಕರಿಗೆ ಮಹತ್ವದ ಕಾಲಘಟ್ಟವಾಗಿದೆ.
ಬೆಳೆದ ಫಸಲು ಕೈಗೆ ಬಂದು ಕೊಯ್ಲು ಮಾಡುವ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಯಾತ್ರೆ ನಡೆಸಲು ಮುಂದಾಗಿವೆ. ಜನಸಾಮಾನ್ಯರನ್ನು ಯಾತ್ರೆಗಳಿಗಾಗಿ ಕರೆದುಕೊಂಡು ಹೋಗುವುದರಿಂದ ಕೃಷಿ ಚಟುವಟಿಕೆಗಳಿಗೆ ಕೂಲಿಗಾರರ ಕೊರತೆ ಕಾಡಲಾರಂಭಿಸುತ್ತದೆ.
ಒಂದೆಡೆ ಯಾತ್ರೆಗಳಿಂದ ಜನದಟ್ಟಣೆ, ಸಾಲು ಸಾಲು ವಾಹನಗಳಿಂದಾಗಿ ಕಿರಿಕಿರಿ ಅನುಭವಿಸುವ ಜನ, ಮತ್ತೊಂದೆಡೆ ಮಾನವ ಸಂಪನ್ಮೂಲದ ದುರ್ಬಳಕೆ ಜನಾಕ್ರೋಶಕ್ಕೆ ಕಾರಣವಾಗಿದೆ.
ಈ ಯಾತ್ರೆಗಳಿಂದಾಗಿ ಜನರಿಗಾಗುವ ಲಾಭವೇನು ಎಂದು ವಿಶ್ಲೇಷಿಸಿದರೆ ಫಲಿತಾಂಶ ಶೂನ್ಯವಾಗಿದೆ.
ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಜನಸಾಮಾನ್ಯರ ಸಮಸ್ಯೆಗಳನ್ನೇ ಅರ್ಥ ಮಾಡಿಕೊಳ್ಳದೆ ಓಟ್ ಬ್ಯಾಂಕ್ ಕ್ರೋಢೀಕರಣಕ್ಕೆ, ಜನರ ಓಲೈಕೆಗೆ ಸಮಾವೇಶವೊಂದೇ ದಾರಿ ಎಂದು ಭಾವಿಸಿದಂತಿದೆ.