ಸಮೀಕ್ಷೆಗಳ ಮೊರೆ ಹೋದ ರಾಜಕೀಯ ಪಕ್ಷಗಳು

Social Share

ಬೆಂಗಳೂರು,ಫೆ.21-ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆ ಎಲ್ಲ ರಾಜಕೀಯ ಪಕ್ಷಗಳ ಆಕಾಂಕ್ಷಿಗಳು ಮತದಾರರ ನಾಡಿ ಮಿಡಿತ ಅರಿಯಲು ಮುಂದಾಗಿದ್ದು ಖಾಸಗಿ ಸಂಸ್ಥೆಗಳ ಸಮೀಕ್ಷೆ ಮೊರೆ ಹೋಗಿದ್ದಾರೆ.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಆಕಾಂಕ್ಷಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದನ್ನು ಅವಲೋಕನ ಮಾಡುತ್ತಿದ್ದು, ಖಾಸಗಿ ಸಂಸ್ಥೆಗಳ ಮೂಲಕ ಸಮೀಕ್ಷೆ ನಡೆಸುತ್ತಿದ್ದಾರೆ.
ಒಂದೊಂದು ಸಂಸ್ಥೆಗೆ ಲಕ್ಷಾಂತರ ರೂ. ಖರ್ಚು ಮಾಡಿ ತಾವು ಕ್ಷೇತ್ರದಲ್ಲಿ ಗೆಲ್ಲಬಹುದೇ? ಹಿನ್ನಡೆಯಾಗಲು ಕಾರಣವೇನು? ಪೂರಕವಾದ ಅಂಶಗಳು, ಜಾತಿವಾರು ಹೀಗೆ ಪ್ರತಿಯೊಂದು ಆಯಾಮಗಳಲ್ಲೂ ಸಮೀಕ್ಷೆ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಸಂಭಾವ್ಯ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ತಮ್ಮ ಗೆಲುವಿನ ಸಾಧ್ಯಾ ಸಾಧ್ಯತೆಗಳನ್ನು ತಿಳಿಯಲು ಖಾಸಗಿ ಏಜೆನ್ಸಿಗಳ ಮೂಲಕ ಕ್ಷೇತ್ರಗಳಲ್ಲಿನ ಸದ್ಯದ ಸ್ಥಿತಿಗತಿ, ಮತದಾರರ ಮನೋಸ್ಥಿತಿ, ಹಾಲಿ ಕ್ಷೇತ್ರವನ್ನು ಪ್ರತಿನಿಸುವ ಶಾಸಕರ ಸಾಮಥ್ರ್ಯ ಮತ್ತು ದೌರ್ಬಲ್ಯ, ಜಾತಿ ಲೆಕ್ಕಾಚಾರ, ಮುಂಬರುವ ದಿನಗಳಲ್ಲಿ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಲು ಅನುಸರಿಸಬೇಕಾದ ಕಾರ್ಯತಂತ್ರಗಳನ್ನು ಅರಿಯಲು ಮುಂದಾಗುತ್ತಿದ್ದಾರೆ.

ಗ್ಯಾಂಗ್‍ಸ್ಟರ್ ಬಿಷ್ಣೋಯ್ ಅಡ್ಡೆಗಳ ಮೇಲೆ NIA ದಾಳಿ

ಖಾಸಗಿ ಸಂಸ್ಥೆಗಳು ನಡೆಸುವ ಈ ಸಮೀಕ್ಷೆ ಗೌಪ್ಯವಾಗಿ ಅಭ್ಯರ್ಥಿಗಳ ಕೈ ಸೇರಲಿದೆಯೇ ಹೊರತು ಸಾರ್ವಜನಿಕವಾಗಿ ಬಹಿರಂಗಗೊಳ್ಳುವುದಿಲ್ಲ ಎಂಬುದೇ ವಿಶೇಷ. ಪ್ರಮುಖ ಖಾಸಗಿ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಂಡು ಕಣದಲ್ಲಿರುವ ಅಭ್ಯರ್ಥಿಗಳು ಕ್ಷೇತ್ರದಲ್ಲಿ ತಮ್ಮ ಪರ ಯಾವ ರೀತಿ ಅಲೆಯಿದೆ ಎಂಬುದನ್ನು ಅರಿಯಲು ತಾವೇ ಹಣ ನೀಡಿ ಸಮೀಕ್ಷೆ ನಡೆಸುತ್ತಿದ್ದು, ಪ್ರಚಾರಕ್ಕೂ ಮುನ್ನವೇ ಮತದಾರರ ಮನದಾಳವನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದಾರೆ.

ಸಮೀಕ್ಷೆಯಲ್ಲಿ ಯಾವ ರೀತಿ ವರದಿ ಬರಲಿದೆ ಎಂಬುದರ ಆಧಾರದ ಮೇಲೆ ತಮ್ಮ ಚುನಾವಣಾ ಪ್ರಚಾರವನ್ನು ನಡೆಸಲು ಸಿದ್ಧತೆ ನಡೆಸಲಿದ್ದಾರೆ. ಮತದಾರರಿಂದ ಸೂಕ್ತ ಸ್ಪಂದನೆ ವ್ಯಕ್ತವಾಗದ ಕಡೆ ಯಾವ ರೀತಿ ಪ್ರಚಾರ ನಡೆಸಬೇಕು ಎಂಬುದರ ಬಗ್ಗೆ ರಣತಂತ್ರ ರೂಪಿಸಲು ಮುಂದಾಗಿದ್ದಾರೆ.

ಇಂತಹ ಸಮೀಕ್ಷೆ ನಡೆಸಿ ವರದಿ ನೀಡುವ ಖಾಸಗಿ ಏಜೆನ್ಸಿಗಳಿಗೆ ಭಾರಿ ಬೇಡಿಕೆ ಬಂದಿದೆ. ಈ ಏಜೆನ್ಸಿಗಳೂ ಚುನಾವಣಾ ಕಣ ರಂಗೇರಲು ತೆರೆಮರೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಈಗಾಗಲೇ ಬೆಂಗಳೂರಿನ ಹಲವು ವಿಧಾನಸಭಾ ಕ್ಷೇತ್ರಗಳು, ಚಿಕ್ಕಮಗಳೂರು, ಬಳ್ಳಾರಿ, ಹಾಸನ ಸೇರಿ ರಾಜ್ಯದ ಹಲವು ಜಿಲ್ಲೆಗಳೂ ಸೇರಿದಂತೆ ಆಯ್ದ ವಿಧಾನಸಭಾ ಕ್ಷೇತ್ರಗಳಲ್ಲಿ ಇಂತಹ ಗುಪ್ತ ಸರ್ವೆ ನಡೆಸಲಾಗಿದ್ದು, ಇನ್ನೂ ಹಲವು ಕ್ಷೇತ್ರಗಳಲ್ಲಿ ಸಮೀಕ್ಷಾ ಕಾರ್ಯಗಳು ಭರದಿಂದ ಸಾಗಿವೆ.

ಖಾಸಗಿ ಏಜೆನ್ಸಿಗಳು ರಾಜಕೀಯ ಆಳ-ಅಗಲವನ್ನು ಬಲ್ಲ ಮಾಧ್ಯಮ ಹಾಗೂ ರಾಜಕೀಯದ ಅನುಭವಿಗಳನ್ನು ಬಳಸಿ ತಮ್ಮದೇ ತಂಡಗಳನ್ನು ರಚಿಸಿ ಈ ಸಮೀಕ್ಷಾ ಕಾರ್ಯಗಳನ್ನು ನಡೆಸುತ್ತಿವೆ.

ಸಮೀಕ್ಷೆಗಳಲ್ಲಿ ಕೆಲತಿಂಗಳ ಹಿಂದೆ ಸುದ್ದಿಯಾಗಿದ್ದ ಹಿಜಾಬ್, ಹಲಾಲ್, ಆಜಾನ್ ವಿವಾದಗಳು ಹೇಗೆ ರಾಜಕೀಯ ಧೃವೀಕರಣಕ್ಕೆ ಕಾರಣವಾಗಬಹುದು ಎಂಬ ಅಂಶದ ಬಗ್ಗೆಯೂ ಅಭಿಪ್ರಾಯ ಸಂಗ್ರಹ ನಡೆಯುತ್ತಿದೆ.

ಯುವತಿಗೆ ತಂದೆ ಹಾಗೂ ಸಹೋದರನಿಂದಲೇ ಲೈಂಗಿಕ ಕಿರುಕುಳ

ಪ್ರಗತಿಪರ ಹಿಂದೂಗಳು ಇಂತಹ ವಿವಾದದ ವಿರುದ್ಧವಾಗಬಹುದೇ ಅಥವಾ ವಿವಾದಗಳೇ ಆಡಳಿತ ಪಕ್ಷಕ್ಕೆ ಬೂಮರಾಂಗ್ ಆಗಬಹುದೇ ಅಥವಾ ಸಾಮಾಜಿಕವಾಗಿ ಲಾಭವಾಗಬಹುದೇ ಎನ್ನುವ ಸೂಕ್ಷ್ಮ ಸಂಗತಿಗಳ ಬಗ್ಗೆಯೂ ಸಮೀಕ್ಷೆಯಲ್ಲಿ ಗಮನಹರಿಸಲಾಗುತ್ತಿದೆ ಎಂದು ಸಮೀಕ್ಷೆಯಲ್ಲಿ ತೊಡಗಿರುವ ತಜ್ಞರೊಬ್ಬರು ತಿಳಿಸಿದ್ದಾರೆ.

ಅಲ್ಲದೆ, ರಾಜ್ಯದಲ್ಲಿ ಒಂದೆರಡು ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದೆಡೆ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಮುಸ್ಲಿಂ ಮತದಾರರು ಭಾರಿ ದೊಡ್ಡ ಪ್ರಮಾಣದಲ್ಲಿದ್ದು, ಆ ಸಮುದಾಯಗಳ ಚಿತ್ತ ಏನಿರಬಹುದು ಎಂಬೆಲ್ಲಾ ಅಂಶಗಳ ಬಗ್ಗೆ ಮಾಹಿತಿಯನ್ನು ಸದ್ದಿಲ್ಲದೆ ಕಲೆ ಹಾಕಲಾಗುತ್ತಿದೆ.

ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಸಮೀಕ್ಷೆ ನಡೆಸಲು ಹಲವು ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆ. ಕೆಲ ಪ್ರತಿಷ್ಠಿತ ಸಂಸ್ಥೆಗಳನ್ನು ರಾಜಕೀಯ ನಾಯಕರೇ ಹುಡುಕಿಕೊಂಡು ಹೋದರೆ, ಹೊಸದಾಗಿ ಅಸ್ತಿತ್ವಕ್ಕೆ ಬಂದ ಸಂಸ್ಥೆಗಳು, ಅಭ್ಯರ್ಥಿಗಳ ಬಳಿ ತೆರಳಿ, ಇಂತಿಷ್ಟು ಹಣ ನೀಡಿದರೆ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿ ನಿಮ್ಮ ಪರವಾಗಿ ಯಾವ ರೀತಿ ಒಲವಿದೆ ಎಂಬುದರ ಬಗ್ಗೆ ವರದಿ ನೀಡುವುದಾಗಿ ಹೇಳಿ ಸಮೀಕ್ಷೆ ನಡೆಸಿ ವರದಿ ನೀಡುತ್ತಿವೆ. ಚುನಾವಣೆ ವೇಳೆ ಇಂಥ ಸಂಸ್ಥೆಗಳಿಗಂತೂ ಹಬ್ಬವಾಗಿದೆ.

ಸಮೀಕ್ಷೆ ಹೇಗೆ?:
ಕ್ಷೇತ್ರ ವ್ಯಾಪ್ತಿಯ ಮತದಾರರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸುವ ಸಂಸ್ಥೆಯ ಸಿಬ್ಬಂದಿ, ಚುನಾವಣಾ ಸಂಬಂಧ ಸಮೀಕ್ಷೆ ನಡೆಸುತ್ತಿದ್ದು, ಕಳೆದ ಬಾರಿ ಯಾರಿಗೆ ಮತ ನೀಡಿದ್ದಿರಿ, ಈ ಬಾರಿ ಯಾರಿಗೆ ಮತ ನೀಡಬೇಕು ಎಂಬುದರ ಬಗ್ಗೆ ನಾಲ್ಕೈದು ಪ್ರಶ್ನೆಗಳನ್ನು ಕೇಳುತ್ತಾ ಮಾಹಿತಿ ಕಲೆ ಹಾಕಲಿದ್ದಾರೆ.

ಹೆಡ್‌ಕಾನ್‌ಸ್ಟೆಬಲ್‌ ಕತ್ತು ಸೀಳಿದ ನಕ್ಸಲರು

ಕ್ಷೇತ್ರ ವ್ಯಾಪ್ತಿಯ ಎಲ್ಲಾ ಕಡೆ ಇರುವ ಜನರಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸಿ ಒಟ್ಟಾರೆ ಅಭಿಪ್ರಾಯವನ್ನು ಕ್ರೋಡೀರಿಸಿ, ಅಭ್ಯರ್ಥಿಗಳಿಗೆ ನೀಡುತ್ತಾರೆ. ಸಮೀಕ್ಷೆ ನೆಪದಲ್ಲಿ ಮತದಾರರಿಗೆ ಕರೆ ಮಾಡಿ ಕಿರಿಕಿರಿ ಉಂಟು ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

Political, parties, surveys, Assembly election,

Articles You Might Like

Share This Article