ಹೊಲಸು ರಾಜಕೀಯಕ್ಕಾಗಿ ಆಣೆ ಪ್ರಮಾಣ ಮಾಡಿ ದೇಗುಲದ ಪಾವಿತ್ರ್ಯತೆ ಹಾಳು ಮಾಡಬೇಡಿ

ಬೆಂಗಳೂರು, ನ.6-ಭ್ರಷ್ಟ ರಾಜಕಾರಣ ಸಾಮಾಜಿಕ ವ್ಯವಸ್ಥೆಯನ್ನು ಹಾಳುಗೆಡವಿದೆ ಎಂಬ ಅಸಮಾಧಾನದ ನಡುವೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಧಾರ್ಮಿಕ ನಂಬಿಕೆಗಳಿಗೂ ಧಕ್ಕೆಯುಂಟಾಗುತ್ತಿರುವುದು ಆತಂಕಕಾರಿ. ರಾಜಕಾರಣಿಗಳು ಸತ್ಯ ಹೇಳುವುದಿಲ್ಲ ಎಂಬುದು ಜನಜನಿತವಾದ ಮಾತು.

ಕೆಲವರು ಇದಕ್ಕೆ ಅಪವಾದವಾಗಿಯೂ ಇದ್ದಾರೆ. ಆದರೆ ಬಹುತೇಕರನ್ನು ಜನ ನಂಬುವುದಿಲ್ಲ. ರಾಜಕಾರಣಿಗಳು ತಮ್ಮ ಹೇಳಿಕೆಗಳನ್ನು ಸತ್ಯ ಎಂದು ನಂಬಿಸಲು ದೇವರು-ದೇವಾಲಯ ಗಳನ್ನು ದುಬರ್ಳಕೆ ಮಾಡಿಕೊಳ್ಳಲು ಪ್ರಯತ್ನ ನಡೆಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಜನರ ಧಾರ್ಮಿಕ ಶ್ರದ್ಧಾಕೇಂದ್ರಗಳ ಜೊತೆ ಹುಡುಗಾಟಿಕೆ ಆಡುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವಿಸಿದೆ. ಪ್ರಮಾಣ ವಚನ ಸ್ವೀಕರಿಸುವಾಗಲೇ ದೇವರ ಮೇಲೆ ಆಣೆ ಮಾಡುವ ರಾಜಕಾರಣಿಗಳು ಅಧಿಕಾರಕ್ಕೇರುತ್ತಿದ್ದಂತೆ ತಮ್ಮ ಪ್ರಮಾಣವನ್ನು ಮರೆತು ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಲು ಕಂಕಣಬದ್ಧರಾಗುವುದು ಸಾಮಾನ್ಯ ಸಂಗತಿ.

ಅಂತಹ ರಾಜಕಾರಣಿಗಳು ಜನರ ನಂಬಿಕೆ ಮತ್ತು ಅನುಕಂಪ ಗಿಟ್ಟಿಸುವ ಸಲುವಾಗಿ ಇತ್ತೀಚೆಗೆ ದೇವರ ಮೇಲೆ ಆಣೆ, ಪ್ರಮಾಣ ಮಾಡುವ ಪರಿಪಾಠವನ್ನು ಆರಂಭಿಸಿದ್ದಾರೆ. 2011ರ ಜೂನ್‍ನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ನಡುವೆ ಈ ಆಣೆ ಪ್ರಮಾಣದ ರಾಜಕೀಯ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಯಡಿಯೂರಪ್ಪ ಅವರನ್ನು ಭ್ರಷ್ಟ ಎಂದು ಟೀಕಿಸಿದ್ದ ಕುಮಾರಸ್ವಾಮಿಯವರು, ಧರ್ಮಸ್ಥಳಕ್ಕೆ ಹೋಗಿ ತಮ್ಮ ಮಾತಿಗೆ ಸಾಕ್ಷಿ ಎಂಬಂತೆ ದೇವರ ಮೇಲೆ ಪ್ರಮಾಣ ಮಾಡಿದ್ದರು.

ಕುಮಾರಸ್ವಾಮಿಯವರ ಆರೋಪವನ್ನು ಅಲ್ಲಗಳೆಯಲು ಮುಂದಾದ ಯಡಿಯೂರಪ್ಪ ಅವರು ಸವಾಲು ಸ್ವೀಕರಿಸಿ ಧರ್ಮಸ್ಥಳಕ್ಕೆ ಹೋದರಾದರೂ ಮುಖಾಮುಖಿ ಭೇಟಿಯಾಗದೆ, ಪ್ರಮಾಣವನ್ನೂ ಮಾಡದೆ ವಾಪಸ್ ಬಂದರು.

ಕಾಕತಾಳೀಯ ಎಂಬಂತೆ ಅನಂತರದ ಬೆಳವಣಿಗೆಯಲ್ಲಿ ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡು ಜೈಲು ಪಾಲಾದರು. ಇದಕ್ಕೆ ಹೊಸ ರೀತಿಯ ವ್ಯಾಖ್ಯಾನ ನೀಡಿದ ಜನರು, ದೇವರ ತಂಟೆಗೆ ಯಾರು ಹೋಗಬಾರದು. ಹೋದವರಿಗೆ ಉಳಿಗಾಲವಿರುವುದಿಲ್ಲ ಎಂದು ಮಾತನಾಡಿಕೊಂಡರು.

ಒಂದಷ್ಟು ದಿನ ಆಣೆ-ಪ್ರಮಾಣಕ್ಕೆ ಬ್ರೇಕ್ ಬಿದ್ದಿತ್ತು. ಈಗ ಅದು ಮತ್ತೆ ಚಾಲ್ತಿಗೆ ಬಂದಿದೆ. ಇತ್ತೀಚೆಗೆ ಮಾಜಿ ಸಚಿವರಾದ ಸಾ.ರಾ.ಮಹೇಶ್ ಅವರು, ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಎಚ್.ವಿಶ್ವನಾಥ್ ವಿರುದ್ಧ ಹಣ ಪಡೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಆರೋಪ ಮಾಡಿದ್ದರು.

ಈ ಕುರಿತಂತೆ ಈ ಇಬ್ಬರೂ ನಾಯಕರ ನಡುವೆ ವಾದ-ವಿವಾದಗಳು ನಡೆದಿದ್ದವು. ಅದು ಮೈಸೂರಿನ ಚಾಮುಂಡೇಶ್ವರಿ ದೇವಿ ಎದುರು ಆಣೆ ಪ್ರಮಾಣದವರೆಗೂ ಹೋಗಿತ್ತು. ನಿಗದಿತ ದಿನಾಂಕವಾದ ಅ.17 ರಂದು ಇಬ್ಬರೂ ನಾಯಕರು ದೇವಸ್ಥಾನಕ್ಕೆ ಭೇಟಿ ನೀಡಿದರು. ಆದರೆ ಮುಖಾಮುಖಿಯಾಗಲಿಲ್ಲ. ಅದೇನು ಭಯವೋ, ಭಕ್ತಿಯೋ ಗೊತ್ತಿಲ್ಲ. ಇಬ್ಬರೂ ಪ್ರಮಾಣ ಮಾಡಲಿಲ್ಲ.

ಆದರೆ ಈ ಆಣೆ ಪ್ರಮಾಣದ ರಾಜಕೀಯ ಒಂದಷ್ಟು ದಿನ ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಗಿತ್ತು. ಜನರ ಸಾಮಾನ್ಯರ ಧಾರ್ಮಿಕ ಭಾವನೆಗಳಿಗೆ ಮುಜುಗರ ಉಂಟು ಮಾಡಿತ್ತು. ಈಗ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಣೆ ಪ್ರಮಾಣದ ಸವಾಲು ಹಾಕಿದ್ದಾರೆ.

ಅನರ್ಹರ ಬಗ್ಗೆ ಯಡಿಯೂರಪ್ಪ ಆಡಿರುವ ಮಾತುಗಳ ಆಡಿಯೋ ಸಂಬಂಧಪಟ್ಟಂತೆ ಸವಾಲು ಹಾಕಿರುವ ಉಗ್ರಪ್ಪ ಅವರು, ಆಡಿಯೋದಲ್ಲಿನ ಹೇಳಿಕೆ ತಮ್ಮದಲ್ಲ ಎಂದು ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಮುಂದೆ ಪ್ರಮಾಣ ಮಾಡಲಿ ಎಂದು ಆಹ್ವಾನ ನೀಡಿದ್ದಾರೆ.

ಇದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ರಾಜಕಾರಣಿಗಳು ಸತ್ಯ ಹೇಳುತ್ತಾರೋ, ಸುಳ್ಳು ಹೇಳುತ್ತಾರೋ ಅದು ಅವರ ಆತ್ಮಸಾಕ್ಷಿಗೆ ಮಾತ್ರ ಗೊತ್ತು. ಅವರು ಏನಾದರೂ ಮಾಡಿಕೊಳ್ಳಲಿ ತಮ್ಮ ಸ್ವಾರ್ಥಕ್ಕಾಗಿ ದೇವಸ್ಥಾನಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿ ರುವುದೇಕೆ ಎಂಬ ಪ್ರಶ್ನೆ ಉದ್ಭವಿಸಿದೆ.

ದೇವಸ್ಥಾನಗಳ ಬಗ್ಗೆ ಈಗಲೂ ಬಹಳಷ್ಟು ಮಂದಿ ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುತ್ತಾರೆ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ದೇವಸ್ಥಾನಗಳನ್ನು ರಾಜಕೀಯ ಅಖಾಡಗಳನ್ನಾಗಿ ಮಾಡಿಕೊಂಡು ಮಲಿನ ಮಾಡುತ್ತಿರುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

ಇನ್ನು ಮುಂದಾದರೂ ರಾಜಕಾರಣಿಗಳು ಈ ಆಣೆ ಪ್ರಮಾಣ ರಾಜಕೀಯವನ್ನು ಬಿಟ್ಟು ಜನಪರ ಕೆಲಸಗಳತ್ತ ಗಮನಹರಿಸಲಿ. ಪ್ರಜಾಪ್ರಭುತ್ವದ ನೆಲೆಯಲ್ಲಿ ಸಾಂವಿಧಾನಿಕವಾಗಿ ನಡೆದುಕೊಳ್ಳಲಿ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.