ಕಳಪೆ ಕಾಮಗಾರಿಯ ಬಣ್ಣ ಬಯಲು ಮಾಡಿದ ಮಳೆರಾಯ

Spread the love

ಬೆಂಗಳೂರು,ಮೇ.9- ನಿನ್ನೆ ಬಿದ್ದ ಮಳೆ ಗುತ್ತಿಗೆದಾರರೊಬ್ಬರ ಕಳಪೆ ಕಾಮಗಾರಿಯನ್ನು ಬಹಿರಂಗಪಡಿಸಿದೆ. ಕಳೆದ ಮಾರ್ಚ್ ಒಂದರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಿದ್ದ ಕ್ರೀಡಾಂಗಣ ಗ್ಯಾಲರಿಗಳು ನಿನ್ನೆ ಸುರಿದ ಮಳೆಗೆ ಧರೆಗುರುಳಿ ಬಿದ್ದಿದೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹೆಚ್‍ಎಸ್‍ಆರ್ ಬಡವಾವಣೆಯಲ್ಲಿ ನಾಲ್ಕು ಕೋಟಿ ರೂ.ವೆಚ್ಚದಲ್ಲಿ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ನಿರ್ಮಿಸಲಾಗಿತ್ತು.

ಕೇವಲ ಎರಡು ತಿಂಗಳ ಹಿಂದೆ ಉದ್ಘಾಟನೆಗೊಂಡಿದ್ದ ಕ್ರೀಡಾಂಗಣ ನಿನ್ನೆ ಬಿದ್ದ ಭಾರಿ ಮಳೆಗೆ ಕುಸಿದುಬಿದ್ದಿದೆ. ಕ್ರೀಡಾಂಗಣದ ಒಂದು ಗ್ಯಾಲರಿ ಉರುಳಿಬಿದ್ದು ಮರಗಳ ಮೇಲೆ ಸಿಲುಕಿಕೊಂಡಿದ್ದರೆ, ಮತ್ತೊಂದು ಗ್ಯಾಲರಿ ಧರೆಗುರುಳಿಬಿದ್ದಿದೆ. ಹೆಚ್‍ಎಸ್‍ಆರ್ ಬಡಾವಣೆಯಲ್ಲಿ ಸುಮಾರು 50 ಕೋಟಿ ರೂ.ವೆಚ್ಚದಲ್ಲಿ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಮೊದಲ ಹಂತದಲ್ಲಿ ನಾಲ್ಕು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಒಳಾಂಗಣ ಕ್ರೀಡಾಂಗಣ ಮಳೆಯಿಂದಾಗಿ ಸಂಪೂರ್ಣ ಹಾಳಾಗಿದೆ.

ಬಿಬಿಎಂಪಿ ವತಿಯಿಂದ ನಿರ್ಮಿಸಲಾಗುತ್ತಿರುವ ಕ್ರೀಡಾಂಗಣವನ್ನು ಕಳಪೆ ಕಾಮಗಾರಿಯಿಂದ ಮಾಡಿರುವುದರಿಂದಲೇ ಇಂತಹ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಮಳೆಯ ರಭಸಕ್ಕೆ ಗ್ಯಾಲರಿ ಹಿಂಭಾಗ ನಿಲ್ಲಿಸಲಾಗಿದ್ದ ವಾಹನಗಳ ಮೇಲೆ ಕಬ್ಬಿಣದ ಸರಳುಗಳು ಬಿದ್ದಿವೆ. ಇನ್ನು ಗ್ರಾನೈಟ್ ಸಮೇತ ಸ್ಲಾಬ್‍ಗಳು ಕಿತ್ತು ಹೋಗಿವೆ.

ಒಂದು ವೇಳೆ ಕ್ರೀಡಾಂಗಣದ ಸುತ್ತಮುತ್ತ ಮರಗಿಡಗಳು ಇಲ್ಲದಿದ್ದರೆ ಭಾರಿ ಪ್ರಮಾದ ಎದುರಾಗುವ ಸಾಧ್ಯತೆಗಳಿದ್ದವು ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ. ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದಾಗಿ ಎರಡೇ ತಿಂಗಳಲ್ಲಿ ನಾಲ್ಕು ಕೋಟಿ ರೂ.ಗಳನ್ನು ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಸಾರ್ವಜನಿಕ ತೆರಿಗೆ ಹಣದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳನ್ನು ಉತ್ತಮ ರೀತಿಯಲ್ಲಿ ನಿರ್ಮಿಸುವತ್ತ ಗಮನ ಹರಿಸಬೇಕು ಎಂದು ಪ್ರಜ್ಞಾವಂತ ನಾಗರೀಕರು ಒತ್ತಾಯಿಸಿದ್ದಾರೆ. ಒಟ್ಟಾರೆ, ನಿನ್ನೆ ರಾತ್ರಿ ಹೆಚ್‍ಎಸ್‍ಆರ್ ಬಡಾವಣೆಯಲ್ಲಿ ಭಾರಿ ಮಳೆಯಾ ಗಿದ್ದು ಸಾಕಷ್ಟು ಅನಾಹುತಗಳು ಸಂಭವಿಸಿದೆ. ಬಡಾವಣೆಯಲ್ಲಿ ಸುಮಾರು 70 ಕ್ಕೂ ಹೆಚ್ಚು ಮರಗಳು ಧರೆಗುರುಳಿಬಿದ್ದಿದ್ದು, ಬಿಬಿಎಂಪಿ ಸಿಬ್ಬಂದಿಗಳು ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರಗಳ ತೆರವು ಕಾರ್ಯಚರಣೆ ನಡೆಸುತ್ತಿದ್ದಾರೆ.

Facebook Comments