ಕಳಪೆ ಕಾಮಗಾರಿ: ಇಬ್ಬರು ಎಂಜಿನಿಯರ್‌ಗಳ ಅಮಾನತು

Social Share

ಬೆಂಗಳೂರು,ಜು.22- ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ಸಂದರ್ಭದಲ್ಲಿ ಕಳಪೆ ರಸ್ತೆ ಕಾಮಗಾರಿ ನಡೆಸಿದ್ದ ಆರೋಪದ ಮೇಲೆ ಇಬ್ಬರು ಎಂಜಿನಿಯರ್‍ಗಳನ್ನು ಬಿಬಿಎಂಪಿ ಅಮಾನತುಗೊಳಿಸಿದೆ. ಸಹಾಯಕ ಕಾರ್ಯಪಾಲಕ ಅಭಿಯಂತರ ಎ.ರವಿ ಹಾಗೂ ಸಹಾಯಕ ಅಭಿಯಂತರ ವಿಶ್ವಾಸ್ ಸೇವೆಯಿಂದ ಅಮಾನತುಗೊಂಡ ಎಂಜಿನಿಯರ್‍ಗಳು.

ಜ್ಞಾನಭಾರತಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಆರ್ಥಶಾಸ್ತ್ರ ವಿಶ್ವವಿದ್ಯಾಲಯದ ಉದ್ಘಾಟನೆಗೆಂದು ಪ್ರಧಾನಿಗಳು ನಗರಕ್ಕೆ ಆಗಮಿಸಿದ್ದರು. ಮೋದಿ ಭೇಟಿ ಹಿನ್ನಲೆಯಲ್ಲಿ ಜ್ಞಾನಭಾರತಿ ಆವರಣದ ಸುತ್ತಮುತ್ತ ಇರುವ ರಸ್ತೆಗಳಿಗೆ ಹೊಸದಾಗಿ ಡಾಂಬರೀಕರಣ ಮಾಡಲಾಗಿತ್ತು.

ಮೋದಿ ಭೇಟಿ ನೀಡಿ ತೆರಳಿದ್ದ ಬೆನ್ನಲ್ಲೆ ಹೊಸದಾಗಿ ಹಾಕಿದ್ದ ಡಾಂಬರು ಕಿತ್ತುಬಂದಿತ್ತು. ಮಾತ್ರವಲ್ಲ ಆರ್ಥಶಾಸ್ತ್ರ ವಿವಿ ಸಮೀಪದ ರಸ್ತೆಯಲ್ಲಿ ಹಾಳುದ್ದದ್ದ ಗುಂಡಿ ಬಿದ್ದಿತ್ತು. ಮೋದಿ ಭೇಟಿ ಸಂದರ್ಭದಲ್ಲಿ ಕಳಪೆ ಕಾಮಗಾರಿ ನಡೆಸಿರುವುದು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇದರ ಜೊತೆಗೆ ಕೆಲವರು ಪ್ರಧಾನಿ ಕಾರ್ಯಾಲಯಕ್ಕೂ ದೂರು ನೀಡಿದ್ದರೂ.

ಹೀಗಾಗಿ ಪ್ರಧಾನಿ ಕಚೇರಿಯವರು ಕಳಪೆ ಕಾಮಗಾರಿ ಬಗ್ಗೆ ರಾಜ್ಯ ಸರ್ಕಾರದಿಂದ ಮಾಹಿತಿ ಕೇಳಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಯಾವಾಗ ಕಳಪೆ ಕಾಮಗಾರಿ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೆ ಮಾಹಿತಿ ರವಾನೆಯಾಯಿತೋ ಎಚ್ಚೆತ್ತ ಬಿಬಿಎಂಪಿಯವರು ಕಳಪೆ ಕಾಮಗಾರಿ ಸತ್ಯಾಸತ್ಯತೆಗೆ ಮುಂದಾಗಿತ್ತು.

ಕಾಮಗಾರಿ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದ ತಂಡಕ್ಕೆ 40 ಎಂಎಂ ಡಾಂಬರೀಕರಣ ಮಾಡಬೇಕಿದ್ದ ಜಾಗದಲ್ಲಿ 30 ಎಂಎಂ ಡಾಂಬರು ಹಾಕಿರುವ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ವರದಿ ನೀಡಿತ್ತು.

ವರದಿ ಆಧಾರದ ಮೇಲೆ ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತರು ಇಬ್ಬರು ಎಂಜಿನಿಯರ್‍ಗಳನ್ನು ಅಮಾನತು ಮಾಡಿದ್ದಾರೆ.

Articles You Might Like

Share This Article