ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಖರೀದಿ ಅಕ್ರಮ : ಸಮಗ್ರ ತನಿಖೆಗೆ ಸಿದ್ಧತೆ

Social Share

ಬೆಂಗಳೂರು,ಆ.20-ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯ ವೇಳೆ ವಿದ್ಯುತ್ ಖರೀದಿಯಲ್ಲಿ ವ್ಯಾಪಕ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, ಇದನ್ನು ಸಮಗ್ರವಾಗಿ ತನಿಖೆ ನಡೆಸಲು ಇಂಧನ ಇಲಾಖೆ ಮುಂದಾಗಿದೆ. ಮುಂದಿನ ವಾರ ಇಂಧನ ಇಲಾಖೆಯಿಂದ ತನಿಖೆಗೆ ಅಧಿಕೃತ ಆದೇಶ ಹೊರಬೀಳಲಿದ್ದು, ಪ್ರಮುಖ ನಾಯಕರಿಗೆ ತನಿಖೆಯ ಬಿಸಿ ಎದುರಾಗುವ ಸಾಧ್ಯತೆ ಇದೆ.

ಈ ಮೂಲಕ 2023ರ ವಿಧಾನಸಭೆ ಚುನಾವಣೆಗೂ ಮುನ್ನವೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮತ್ತೊಂದು ಸುತ್ತಿನ ರಾಜಕೀಯ ಸಂಘರ್ಷ ಏರ್ಪಡುವುದು ಬಹುತೇಕ ಖಚಿತವಾಗಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ್ದ ದರವನ್ನು ಉಲ್ಲಂಘಿಸಿ 2013ರಿಂದ 2018ರವರೆಗೆ ಒಟ್ಟು ಐದು ವರ್ಷಗಳ ಕಾಲ ವಿವಿಧ ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿಸಿದ್ದ ಸಂದರ್ಭದಲ್ಲಿ ನೂರಾರು ಅಕ್ರಮ ನಡೆದಿರುವುದನ್ನು ಇಂಧನ ಇಲಾಖೆ ಪತ್ತೆ ಮಾಡಿದೆ.

ಪ್ರಸ್ತುತ ಬಿಜೆಪಿ ವಿರುದ್ಧ ಅಬ್ಬರಿಸುತ್ತಿರುವ ಹಾಗೂ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ವಿದ್ಯುತ್ ಖರೀದಿ ಅಕ್ರಮದಲ್ಲಿ ಸಿಲುಕಿಸಿ ಕಾಂಗ್ರೆಸ್‍ಗೆ ಮುಖಭಂಗ ಉಂಟುಮಾಡುವ ಲೆಕ್ಕಾಚಾರ ಆಡಳಿತಾರೂಢ ಬಿಜೆಪಿಯದ್ದು.

ಇಂಧನ ಸಚಿವ ಸುನೀಲ್‍ಕುಮಾರ್ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಈಗಾಗಲೇ ಕಾನೂನು ತಜ್ಞರ ಸಲಹೆಯನ್ನು ಪಡೆದಿದ್ದು, ಈ ವಾದದಲ್ಲಿ ತನಿಖೆಗೆ ಆದೇಶ ಮಾಡಲಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ವಿದ್ಯುತ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆಗೆ ಅಧಿಕೃತವಾಗಿ ಆದೇಶಿಸಲಿದ್ದಾರೆ ಎಂದು ತಿಳಿದುಬಂದಿದೆ.

ಒಂದು ಯೂನಿಟ್‍ಗೆ 2.50 ರೂ. ನಿಗದಿಪಡಿಸಿದ್ದರೂ ಅಂದಾಜು ಪ್ರತಿ ಯೂನಿಟ್‍ಗೆ 4 ರೂ. ನೀಡಿ ವಿದ್ಯುತ್ ಖರೀದಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು, ಇಲಾಖೆಗೆ ನೂರಾರು ಕೋಟಿ ನಷ್ಟವಾಗಿರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಅಲ್ಲದೆ ವಿದ್ಯುತ್ ಖರೀದಿ ಒಪ್ಪಂದ ( ಪವರ್ ಪರ್ಚೇಸ್ ಎಗ್ರಿಮೆಂಟ್ ) ದಲ್ಲಿ ದರ ನಿಗದಿ ವಿಧಾನ ಅವೈಜ್ಞಾನಿಕವಾಗಿ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. ಈ ಅವೈಜ್ಞಾನಿಕ ಒಪ್ಪಂದದಿಂದ ಎಸ್ಕಾಂಗಳಿಗೆ ಭಾರೀ ಪ್ರಮಾಣದಲ್ಲಿ ಹೊರೆಯಾಗುತ್ತಿದೆ. ಸರಕಾರದ ಬೊಕ್ಕಸಕ್ಕೆ ಪ್ರತಿವರ್ಷವೂ ಆಗುತ್ತಿರುವ ನಷ್ಟ ತಪ್ಪಿಸುವುದಕ್ಕೆ ಪುನರ್ ಪರಿಶೀಲನೆ ನಡೆಸುವುದು ಈಗ ಅನಿವಾರ್ಯವಾಗಿದೆ ಎಂಬುದು ಸುನೀಲ್‍ಕುಮಾರ್ ಅವರ ವಾದ.

2010ರಿಂದ ಇಲ್ಲಿಯವರೆಗೆ ನಡೆದ ದೀರ್ಘಾವ ಖರೀದಿ ಒಪ್ಪಂದ ಹಾಲಿ ಇರುವ ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟಾಗಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಪಿಪಿಎಗಳ ಹಿಂದಿರುವ ಲೆಕ್ಕಾಚಾರ ಪತ್ತೆ ಹಚ್ಚಲು ಸೂಚಿಸಿದ್ದರು.

ಐದು ರೂ.ಗೆ ಮೇಲ್ಪಟ್ಟಿರುವ ಖರೀದಿ ಒಪ್ಪಂದದ ಬಗ್ಗೆ ಪುನರ್ ಪರಿಶೀಲನೆ ನಡೆಸುವಂತೆ ಅವರು ಎಲ್ಲ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಕೆಲ ತಿಂಗಳ ಹಿಂದೆ ಸೂಚನೆ ನೀಡಿದ್ದರು. ಮೇಲ್ನೋಟಕ್ಕೆ ವಿದ್ಯುತ್ ಖರೀದಿಯಲ್ಲಿ ಅಕ್ರಮದ ವಾಸನೆ ಕಂಡುಬಂದಿರುವುದರಿಂದ ಉನ್ನತ ಮಟ್ಟದ ತನಿಖೆ ಅಗತ್ಯವಿದೆ ಎಂದು ಅಜ್ಞಾಕಾರಿಗಳು ಪ್ರತಿಪಾದಿಸಿದ್ದರು.

ಉಷ್ಣ, ಪವನ, ಸೌರ, ಕೋ-ಜೆನ್, ಕಿರು ಜಲ ವಿದ್ಯುತ್ ಸೇರಿದಂತೆ ಎಲ್ಲ ಬಗೆಯ ವಿದ್ಯುತ್ ಉತ್ಪಾದಕ ವಲಯದಲ್ಲೂ ಖರೀದಿ ಒಪ್ಪಂದವನ್ನು ಆಯಾ ಕಾಲ ಘಟಕ್ಕೆ ಸೃಷ್ಟಿಯಾಗಿದ್ದ ವಿದ್ಯುತ್ ಲಭ್ಯತೆ, ಅಭಾವ ಹಾಗೂ ಉತ್ಪಾದನೆ ಆಧರಿಸಿ ನಡೆಸಲಾಗಿದೆ. ಬಹುತೇಕ ಒಪ್ಪಂದಗಳು 26 ವರ್ಷಗಳಷ್ಟು ದೀರ್ಘಾವಯಾಗಿದ್ದು, 8.5 ರಿಂದ 11 ರೂ.ವರೆಗೂ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ವಿದ್ಯುತ್ ಸರಬರಾಜು ಕಂಪನಿಗಳಿಗೆ ಹೊರೆಯಾಗಿ ಪರಿಣಮಿಸಿದೆ ಎಂಬುದನ್ನು ಅಜ್ಞಾಕಾರಿಗಳು ಉಲ್ಲೇಖಿಸಿದ್ದಾರೆ.

ಪ್ರತಿ ಯುನಿಟ್‍ಗೆ 6 ರೂ. ನಿಂದ 10ರ ವರೆಗಿನ ದರದಲ್ಲಿ 705 ಮೆಗಾ ವ್ಯಾಟ್ ಪವನ ವಿದ್ಯುತ್, 4 ರಿಂದ 6 ರೂ. ಪ್ರತಿ ಯುನಿಟ್ ದರದಲ್ಲಿ 2720 ಮೆಗಾ ವ್ಯಾಟ್, 4 ರೂ.ಗಿಂತ ಕಡಿಮೆ ದರದಲ್ಲಿ 2060 ಮೆಗಾ ವ್ಯಾಟ್ ಸೇರಿದಂತೆ ವಾರ್ಷಿಕ 5485 ಮೆಗಾ ವ್ಯಾಟ್ ವಿದ್ಯುತ್ ಅನ್ನು ರಾಜ್ಯ ಸರಕಾರ ಈ ಒಪ್ಪಂದ ದ ಪ್ರಕಾರ ಖರೀದಿ ಮಾಡಬೇಕಾದ ಅನಿವಾರ್ಯತೆ ಇದೆ.

ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಈ ರೀತಿಯ ಒಪ್ಪಂದಗಳು ವ್ಯಾಪಕವಾಗಿ ನಡೆದಿರುವುದು ಸಭೆಯಲ್ಲಿ ಬೆಳಕಿಗೆ ಬಂದಿದೆ.

Articles You Might Like

Share This Article