ಬೆಂಗಳೂರು,ಫೆ.19- ಅಧಿಕಾರ ಹಂಚಿಕೆಯ ಸೂತ್ರಕ್ಕೆ ಬದ್ಧವಾಗಿರುವಂತೆ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿರುವುದರಿಂದಾಗಿಯೇ ರಾಜ್ಯದಲ್ಲಿ ಬಣ ರಾಜಕೀಯ ತೀವ್ರಗೊಂಡಿದ್ದು, ಆರೋಪ-ಪ್ರತ್ಯಾರೋಪಗಳು ಮುನ್ನೆಲೆಗೆ ಬರುತ್ತಿವೆ ಎಂಬ ಚರ್ಚೆ ನಡೆದಿದೆ.
2023ರ ವಿಧಾನಸಭೆ ಚುನಾವಣೆ ಬಳಿಕ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ದೆಹಲಿಯಲ್ಲಿ ನಡೆದ ಏಳು ದಿನಗಳ ರಾಜಿ ಸಂಧಾನದ ಕಸರತ್ತಿನ ಅಂತಿಮ ಭಾಗವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಲಿದ್ದಾರೆ, ಡಿ.ಕೆ.ಶಿವಕುಮಾರ್ ಸಂಪುಟದ ಏಕೈಕ ಉಪಮುಖ್ಯಮಂತ್ರಿಯಾಗಿದ್ದು, ಲೋಕಸಭೆಯ ಚುನಾವಣೆಯವರೆಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಹೆಚ್ಚುವರಿ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ ಎಂದು ಪ್ರಕಟಿಸಿದರು.
ಅನಧಿಕೃತ ಮೂಲಗಳ ಪ್ರಕಾರ, ಎರಡೂವರೆ ವರ್ಷಗಳ ಮಟ್ಟಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ. ಆನಂತರ ಬದಲಾವಣೆಯಾಗಲಿದೆ’ ಎಂದು ಹೇಳಲಾಗಿತ್ತು. ಆಡಳಿತ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ ಎಂಬ ಕಾರಣಕ್ಕೆ ಪಕ್ಷದ ಎಲ್ಲಾ ನಾಯಕರು ಮುಖ್ಯಮಂತ್ರಿ ಬದಲಾವಣೆ ಇಲ್ಲ, ಸಿದ್ದರಾಮಯ್ಯನವರೇ ಅವಧಿ ಪೂರ್ಣಗೊಳಿಸಲಿದ್ದಾರೆ ಎಂದು ಪದೇ ಪದೇ ಪ್ರತಿಪಾದಿಸುತ್ತಿದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನ ಅಧಿಕಾರ ಹಂಚಿಕೆಯ ಸೂತ್ರ ಕುರಿತು ಒಂದಿಷ್ಟು ಚರ್ಚೆಗಳು ನಡೆದವು. ಡಿ.ಕೆ.ಶಿವಕುಮಾರ್ ಅವರ ಬಣ ಎರಡೂವರೆ ವರ್ಷದ ಅಧಿಕಾರ ಹಂಚಿಕೆಯ ಅಘೋಷಿತ ಸಂಧಾನ ಸೂತ್ರದ ಬಗ್ಗೆ ಬಹಿರಂಗ ಹೇಳಿಕೆಗಳ ಮೂಲಕ ಚರ್ಚೆ ಮಾಡಿತು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಬಣ ಜಾತಿವಾರು ಐದು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಯ ಬೇಡಿಕೆಯನ್ನು ಮುಂದಿಟ್ಟಿತ್ತು.
ಕಾಂಗ್ರೆಸ್‌ಗೆ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖುದ್ದು ಮಧ್ಯ ಪ್ರವೇಶ ಮಾಡಿ ಯಾವುದೇ ಸ್ಥಾನಮಾನದ ಬಗ್ಗೆ ಯಾರೂ ಬಹಿರಂಗ ಚರ್ಚೆ ಮಾಡಬಾರದು ಎಂದು ಖಡಕ್ಕಾಗಿ ಹೇಳಿದರು. ಒಂದಷ್ಟು ಕಾಲ ಎಲ್ಲಾ ಚರ್ಚೆಗಳು ತಣ್ಣಗಾದವು. ಆದರೂ ಅದು ಚುನಾವಣೆಯ ಮೇಲೆ ಪರಿಣಾಮ ಬೀರಿ, ರಾಜ್ಯದಿಂದ ಲೋಕಸಭೆಯ 22 ಸ್ಥಾನಗಳನ್ನು ಗೆಲ್ಲುವ ಕಾಂಗ್ರೆಸ್ಸಿನ ಗುರಿಗೆ ಪೆಟ್ಟು ಬಿದ್ದಿತ್ತು. ಜಾತಿವಾರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿದ್ದರೆ ಇನ್ನಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಿತ್ತು ಎಂದು ಕೆ.ಎನ್.ರಾಜಣ್ಣ ಸೇರಿ ಹಲವಾರು ಸಚಿವರು ತಮ್ಮ ಹಿಂದಿನ ಹೇಳಿಕೆಗಳನ್ನು ಸಮರ್ಥಿಸಿಕೊಂಡರು.
ಇತ್ತೀಚಿಗೆ ದೆಹಲಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ಹಂಚಿಕೆಯ ಸೂತ್ರಕ್ಕೆ ಬದ್ಧವಾಗಿರುವಂತೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಸಿಡಿಮಿಡಿಗೊಂಡಿರುವ ಸಿದ್ದರಾಮಯ್ಯ ತಮ್ಮ ಪ್ರತಿಸ್ಪರ್ಧಿ ಡಿ.ಕೆ.ಶಿವಕುಮಾರ್ ವಿರುದ್ಧ ಬೆಂಬಲಿಗರನ್ನು ಎತ್ತಿ ಕಟ್ಟಿದ್ದಾರೆ ಎಂಬ ಆರೋಪಗಳೂ ಇವೆ.
ಯಾರೂ ಪಕ್ಷದ ವಿಚಾರವಾಗಿ ಬಹಿರಂಗ ಹೇಳಿಕೆ ನೀಡಬಾರದು, ನಿಮಗೆ ನೀಡಿರುವ ಜವಾಬ್ದಾರಿಯನ್ನು ಬಾಯಿಮುಚ್ಚಿಕೊಂಡು ನಿಭಾಯಿಸುವ ಕಡೆಗೆ ಗಮನ ನೀಡಿ ಎಂದು ಖರ್ಗೆಯವರು ಮತ್ತೊಮ್ಮೆ ಹೇಳಿದ ಹೊರತಾಗಿಯೂ ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ ತಲೆ ಕೆಡಿಸಿಕೊಳ್ಳದೆ ನೇರವಾಗಿ ಅಖಾಡಕ್ಕಿಳಿದು ಡಿ.ಕೆ.ಶಿವಕುಮಾರ್ ಅವರ ವಿರುದ್ದ ತೊಡೆ ತಟ್ಟಿದ್ದಾರೆ.
ಪರಮೇಶ್ವರ್ ಪರೋಕ್ಷವಾಗಿ ತೆರೆಮರೆಯಲ್ಲಿ ಉಪಮುಖ್ಯಮಂತ್ರಿಯಾಗುವ ಅಭಿಲಾಷೆಯೊಂದಿಗೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ಮತ್ತು ಅವರ ಬೆಂಬಲಿಗರು ಹೆಚ್ಚು ಸಹನೆಯಿಂದ ವರ್ತಿಸುತ್ತಿದ್ದು ಹಲವಾರು ಪ್ರಚೋದನಕಾರಿ ಹೇಳಿಕೆಗಳ ನಡುವೆಯೂ ಸಮಾಧಾನದಿಂದಲೇ ಪ್ರತಿಕ್ರಿಯಿಸುತ್ತಾ ಬಂದಿದ್ದಾರೆ..
ಪಕ್ಷ ವಿರೋಧಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ಹೇಳುತ್ತಲೇ ಕೆ.ಎನ್.ರಾಜಣ್ಣ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕು, ಒಬ್ಬರಿಗೆ ಒಂದೇ ಹುದ್ದೆ, 2023ರ ಸಂಧಾನ ಸೂತ್ರದ ಬಗ್ಗೆ ಹೈಕಮಾಂಡ್ ನಿಲುವೇನು? ಎಂಬೆಲ್ಲಾ ಹೇಳಿಕೆಗಳನ್ನು ನೀಡುತ್ತಾ ಗೊಂದಲ ಮೂಡಿಸುತ್ತಿದ್ದಾರೆ. ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿದ್ದಾಗ ಕೆ.ಎನ್.ರಾಜಣ್ಣ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿವಾದ ಸೃಷ್ಟಿಸಿದ್ದರು.
ಅದೇ ವೇಳೆ ಶಾಸಕರಾಗಿದ್ದ ಅಲ್ಪಸಂಖ್ಯಾತ ಸಮುದಾಯದ ಹಿರಿಯ ನಾಯಕ ರೋಶನ್ ಬೇಗ್ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯರನ್ನು ಟೀಕಿಸಿದ್ದರು. ಈ ಎರಡೂ ಪ್ರಸಂಗಗಳಲ್ಲಿ ರೋಶನ್ ಬೇಗ್‌ರ ವಿರುದ್ಧ ಹೈಕಮಾಂಡ್ ಶಿಸ್ತು ಕ್ರಮ ಜರುಗಿಸಿತ್ತು. ರಾಜಣ್ಣ ಬೇಕು-ಬೇಡ ಎಂಬಂತಹ ಉಡಾಫೆಯ ಕ್ಷಮೆಯಾಚನೆ ಮೂಲಕ ಪಕ್ಷದಲ್ಲೇ ಉಳಿದುಕೊಂಡರು. ನಂತರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಗೆಲುವು ಕಂಡರು ತಮ್ಮ ಪುತ್ರನನ್ನು ವಿಧಾನಪರಿಷತ್ತಿಗೆ ಆಯ್ಕೆ ಮಾಡಿಕೊಂಡರು. ತಾವು ಸಚಿವರಾದರು. ಸಾಲದೆಂಬಂತೆ ಲೋಕಸಭೆ ಚುನಾವಣೆಯಲ್ಲಿ ಪುತ್ರನಿಗೆ ಟಿಕೆಟ್ ಕೊಡಿಸುವ ಪ್ರಯತ್ನ ಮಾಡಿದರು.
ಈ ಘಟನೆ ಮೂಲಕ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರ ವಿರೋಧಿಗಳಿಗೆ ಉಳಿಗಾಲವಿಲ್ಲ. ಉಳಿದಂತೆ ಯಾವ ನಾಯಕರೂ ಅಷ್ಟು ಪ್ರಭಾವಿಗಳಲ್ಲ ಎಂಬ ಸಂದೇಶ ರವಾನೆ ಆಯಿತು. ಈಗ ರಾಜಣ್ಣ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ ಎಂದು ಹೇಳುತ್ತಲೇ ಹೈಕಮಾಂಡ್ ಸೂಚನೆಯನ್ನು ಧಿಕ್ಕರಿಸಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಎಷ್ಟೇ ಪ್ರಭಾವಿಯಾಗಿದ್ದರೂ ರಾಜಣ್ಣ ಅವರಿಗೆ ಕಡಿವಾಣ ಹಾಕಲು ಸಾಧ್ಯವಾಗದೇ ಸಿಡಿಮಿಡಿಗೊಳ್ಳುತ್ತಿದ್ದಾರೆ.
ರಾಜಣ್ಣ ಅವರಿಗೆ ಖುದ್ದು ಸಿದ್ದರಾಮಯ್ಯನವರೇ ತಿಳಿಹೇಳಿ ಈ ಸಂದರ್ಭದಲ್ಲಿ ಸಮಾಧಾನ ಪಡಿಸಬಹುದು ಎಂಬ ನಿರೀಕ್ಷೆಗಳಿದ್ದವು. ಆದರೆ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಯಾವುದೇ ವಿವಾದದ ಹೇಳಿಕೆಗಳಿಗೆ ಹೇಳಿಕೆಗಳನ್ನು ನೀಡುವುದಿಲ್ಲ, ರಾಜಣ್ಣ ಮತ್ತು ಡಿ.ಕೆ.ಶಿವಕುಮಾರ್ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ. ಅಧಿಕಾರ ಹಂಚಿಕೆ ಸೂತ್ರವನ್ನು ಹೈಕಮಾಂಡ್ ನೋಡಿಕೊಳ್ಳಲಿದೆ ಎನ್ನುವ ಮೂಲಕ ಪರಿಸ್ಥಿತಿ ಮತ್ತಷ್ಟು ಕಗ್ಗಂಟಾಗುವಂತೆ ಮಾಡಿದ್ದಾರೆ.
ಕಾಂಗ್ರೆಸ್ ಒಳವಲಯದಲ್ಲಿ ಬೇರೆ ರೀತಿಯ ಚರ್ಚೆಗಳು ನಡೆಯುತ್ತಿವೆ. ಹೈ ಕಮಾಂಡ್ ಸಿದ್ದರಾಮಯ್ಯ ಅವರಿಗೆ ಅಧಿಕಾರ ಹಂಚಿಕೆಯ ಸೂತ್ರಕ್ಕೆ ಬದ್ಧವಾಗಿರುವಂತೆ ಸೂಚನೆ ನೀಡಿದೆ. ಹೀಗಾಗಿ ಸಿದ್ದರಾಮಯ್ಯ ಪ್ರತಿ ತಂತ್ರಗಾರಿಕೆ ಭಾಗವಾಗಿ ಬೆಂಬಲಿಗರನ್ನು ಮುನ್ನೆಲೆಗೆ ಬಿಟ್ಟಿದ್ದಾರೆ ಎಂಬ ಮಾತುಗಳಿವೆ.
ಒಂದು ವೇಳೆ ಹೈಕಮಾಂಡ್ ಅಧಿಕಾರ ಹಂಚಿಕೆಯ ಸೂತ್ರವನ್ನು ಜಾರಿ ಮಾಡಲು ಮುಂದಾಗಿದ್ದೇ ಆದರೆ ಸಿದ್ದರಾಮಯ್ಯ ಜಾತಿ ಜನಗಣತಿಯ ವರದಿಯನ್ನು ಬಹಿರಂಗಪಡಿಸಿ, ತಮ್ಮನ್ನು ತಾವು ಹಿಂದುಳಿದ ವರ್ಗಗಳ ನಾಯಕ ಎಂದು ಪ್ರಭಾವಿಯಾಗಿ ಬಿಂಬಿಸಿಕೊಳ್ಳುತ್ತಾರೆ. ಜೊತೆಗೆ ಹೈಕಮಾಂಡ್‌ನಿಂದ ಅನ್ಯಾಯವಾಗಿದೆ ಎಂಬ ಸಾರ್ವತ್ರಿಕ ಅಭಿಪ್ರಾಯವನ್ನು ರೂಢಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಕೆಲ ಸಚಿವರು ತುತ್ತೂರಿ ಊದುತ್ತಿದ್ದಾರೆ ಎಂದು ಟೀಕಿಸಲಾಗುತ್ತಿದೆ.