ಅಪ್ಪು ಹೆಸರಲ್ಲಿ ಲಾಲ್‍ಬಾಗ್‍ನಲ್ಲಿ ಫಲಪುಷ್ಪ ಪ್ರದರ್ಶನ

Social Share

ಬೆಂಗಳೂರು,ಜು.12- ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿಶ್ವ ವಿಖ್ಯಾತ ಲಾಲ್‍ಬಾಗ್‍ನಲ್ಲಿ ಆಗಸ್ಟ್ 5ರಿಂದ 15ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಪವರ್ ಸ್ಟಾರ್ ಪುನೀತ್‍ರಾಜ್ ಕುಮಾರ್ ಹೆಸರಿನಲ್ಲಿ ಈ ಬಾರಿ ಪ್ರದರ್ಶನ ಆಯೋಜಿಸಲಾಗುವುದು ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಲ್‍ಬಾಗ್‍ನಲ್ಲಿ ಪುನೀತ್‍ರಾಜ್‍ಕುಮಾರ್ ಅವರ ಗಾಜನೂರಿನ ಮನೆಯ ಮಾದರಿ ವಿಶೇಷ ಆಕರ್ಷಣೆಯಾಗಲಿದೆ ಎಂದರು. ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.

ಕೋವಿಡ್ ಮಾರ್ಗಸೂಚಿ ಹಾಗೂ ನಿಯಮಗಳ ಪಾಲನೆಯೊಂದಿಗೆ ಪ್ರದರ್ಶನ ನಡೆಯಲಿದ್ದು, ಆ.15ರ ನಂತರವೂ ವೀಕ್ಷಕರ ಬೇಡಿಕೆಗೆ ಅನುಗುಣವಾಗಿ ಒಂದೆರಡು ದಿನ ವಿಸ್ತರಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದರು.

ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ವಿದೇಶಗಳಿಂದಲೂ ಹೂಗಳನ್ನು ತರಿಸಲಾಗುವುದು. ಕೋವಿಡ್‍ನಿಂದಾಗಿ ಕಳೆದೆರಡು ವರ್ಷ ಫಲಪುಷ್ಪ ಪ್ರದರ್ಶನ ಮಾಡಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದರು. ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಮಳೆಯಿಂದ ಉಂಟಾಗಿರುವ ತೋಟಗಾರಿಕಾ ಬೆಳೆನಷ್ಟದ ವರದಿಯನ್ನು ಪಡೆಯ ಲಾಗುತ್ತಿದೆ. ವರದಿ ಬಂದ ನಂತರ ರೈತರಿಗೆ ಅಗತ್ಯವಿರುವ ಸಹಾಯ ಮಾಡಲಾಗುವುದು ಎಂದರು.

ವಿವಿಧ ತೋಟಗಾರಿಕಾ ಬೆಳೆಗಳು ಹಾನಿಗೀಡಾಗಿರುವುದು ಸರ್ಕಾರ ಗಮನಿಸುತ್ತಿದೆ. ಸಂಕಷ್ಟದಲ್ಲಿರುವ ರೈತರ ಜತೆ ಸರ್ಕಾರ ಇದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.

Articles You Might Like

Share This Article