ಕುರಿಗಳ ಸಾವಿಗೆ ನೀಡುವ ಪರಿಹಾರದ ಮೊತ್ತ ಹೆಚ್ಚಿಸಲು ಮನವಿ

Social Share

ಬೆಂಗಳೂರು,ಫೆ.21-ಅನ್ಯ ಕಾರಣಗಳಿಂದ ಸಾವನ್ನಪ್ಪುವ ಕುರಿಗಳಿಗೆ ನೀಡುವ ಪರಿಹಾರದ ಮೊತ್ತವನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ವಿಧಾನಸಭೆಗೆ ತಿಳಿಸಿದರು.
ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಒಂದು ಕುರಿ ಅನಾರೋಗ್ಯ ಇಲ್ಲವೇ ಬೇರೆ ಕಾರಣಗಳಿಂದ ಸಾವನ್ನಪ್ಪಿದರೆ ಅದಕ್ಕೆ 3 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಈ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಎಂದು ಸಿಎಂಗೆ ಮನವಿ ಮಾಡಲಾಗುವುದು. ಮುಂಬರುವ ಬಜೆಟ್ನಲ್ಲಿ ಇದು ಹೆಚ್ಚಳವಾಗುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಬಂಡೆಪ್ಪ ಕಾಶಂಪುರ್ ಒಂದು ಕುರಿ ಸತ್ತರೆ ಕೇವಲ 3 ಸಾವಿರ ಪರಿಹಾರ ನೀಡಲಾಗುತ್ತಿದೆ. ಈ ಮೊತ್ತ ಏನೇನೂ ಸಾಲದು. ಹೀಗಾಗಿ ತಕ್ಷಣವೇ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಕನಿಷ್ಠ ಒಂದು ಕುರಿಗೆ 10 ಸಾವಿರ ರೂ. ಪರಿಹಾರ ಕೊಡಬೇಕು. ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಕುರಿಗಳಿಗೆ ಪರಿಹಾರವನ್ನೇ ಒದಗಿಸಿಲ್ಲ. ಅಷ್ಟಕ್ಕೂ ಕುರಿಗಳನ್ನು ಹಾಲುಮತದವರು, ಪರಿಶಿಷ್ಟ ಜಾತಿ/ವರ್ಗದವರು, ಬಡವರು ಸಾಕುತ್ತಾರೆ. ಅವರಿಗೆ ಸಕಾಲಕ್ಕೆ ಸರಿಯಾಗಿ ಪರಿಹಾರ ಕೊಡದಿದ್ದರೆ ಜೀವನ ನಿರ್ವಹಣೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ಶಾಸಕ ರಾಜುಗೌಡ ನಾಯಕ್, ಬಂಡೆಪ್ಪ ಕಾಶಂಪುರ್ ವೃತ್ತಿಯಲ್ಲಿ ಕುರುಬರು. ಆದರೂ ನಾನು 7 ಸಾವಿರ ಕುರಿಗಳನ್ನು ಸಾಕಿದ್ದೇನೆ. ಇದರಲ್ಲಿ 1400 ಕುರಿಗಳು ಬೇರೆ ಬೇರೆ ಕಾರಣಗಳಿಂದ ಸಾವನ್ನಪ್ಪಿದವು. ಬಡವರಿಗೆ ಪರಿಹಾರದ ಮೊತ್ತವನ್ನು ನೀಡದಿದ್ದರೆ ಹೇಗೆ ಜೀವನ ನಿರ್ವಹಣೆ ಮಾಡಲು ಸಾಧ್ಯ. ಕೂಡಲೇ ಕುರಿ ಸತ್ತರೆ 10 ಸಾವಿರ ರೂ. ಹೆಚ್ಚಳ ಮಾಡುವ ಆದೇಶವನ್ನು ಹೊರಡಿಸಿ ನಿಮ್ಮ ಅಕಾರಿಗಳಿಗೆ ಸೂಚನೆ ಕೊಡಿ ಎಂದು ಹೇಳಿದರು.
ಮಾರ್ಚ್ವೊಳಗೆ ಪೂರ್ಣ: ಸದಸ್ಯ ಐಹೊಳೆ ಡಿ. ಮಹಾಲಿಂಗಪ್ಪ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಭು ಚವ್ಹಾಣ್ ಅವರು, ಬೆಳಗಾವಿ ಜಿಲ್ಲೆ ರಾಯಭಾಗ ಮತ್ತು ಚಿಕ್ಕೋಡಿ ತಾಲ್ಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಶು ಚಿಕಿತ್ಸಾ ಕೇಂದ್ರಗಳು ಮತ್ತು ಕಟ್ಟಡಗಳ ಕಾಮಗಾರಿ ಮಾರ್ಚ್ ತಿಂಗಳೊಳಗೆ ಸೇವೆಗೆ ಲಭ್ಯವಾಗಲಿದೆ ಎಂದರು.
ಚಿಕ್ಕೋಡಿ ತಾಲ್ಲೂಕಿನ 6, ರಾಯಭಾಗ ತಾಲ್ಲೂಕಿನ 7 ಪಶುವೈದ್ಯಕೀಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಕೆಲವು ಆಸ್ಪತ್ರೆಗಳು ಶಿಥಿಲೀಕರಣಗೊಂಡಿರುವುದು ನನ್ನ ಗಮನಕ್ಕೆ ಬಂದಿದೆ. ಆದಷ್ಟು ಶೀಘ್ರ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು.

Articles You Might Like

Share This Article