ಹಕ್ಕಿ ಜ್ವರ : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಹೈಅಲರ್ಟ್‍ಗೆ ಸೂಚನೆ

ಬೆಂಗಳೂರು, ಜ.6- ಕೇರಳದ ಕೊಟ್ಟಾಯಂ, ಆಲಪ್ಪುಳ ಜಿಲ್ಲೆಗಳಲ್ಲಿ ಬಾತುಕೋಳಿಗಳಲ್ಲಿ ಹಕ್ಕಿ ಜ್ವರದ ಸೋಂಕು ದೃಢಪಟಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಹೈ ಅಲರ್ಟ್‍ಗೆ ಸೂಚನೆ ನೀಡಲಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭುಚವ್ಹಾಣ್ ತಿಳಿಸಿದ್ದಾರೆ. ಹಕ್ಕಿ ಜ್ವರದ ಸೋಂಕು ರಾಜ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿರುವುದರಿಂದ ಸೋಂಕು ಹರಡದಂತೆ ಎಲ್ಲಾ ಜಿಲ್ಲೆಗಳಲ್ಲಿ ಕ್ರಮ ಕೈಗೊಳ್ಳುವಂತೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರಿಗೆ ಸೂಚಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಕ್ಕಿ ಜ್ವರದ ಸರ್ವೇಕ್ಷಣಾ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಕೇರಳಕ್ಕೆ ಹೊಂದಿಕೊಂಡಿರುವ ರಾಜ್ಯದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳ ಉಪನಿರ್ದೇಶಕರಿಗೆ ಹಕ್ಕಿ ಜ್ವರದ ಸಂಭಾವ್ಯ ಹರಡುವಿಕೆ ತಡೆಗಟ್ಟಲು ಸೂಚಿಸಲಾಗಿದೆ. ಅಲ್ಲದೆ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ರೋಗ ನಿಯಂತ್ರಣ ಮಟ್ಟದ ಸಭೆ ನಡೆಸಿ ಸೂಕ್ತ ಮುಂಜಾಗ್ರತಾ ಕ್ರಮಕ್ಕೆ ನಿರ್ದೇಶನ ನೀಡಲಾಗಿದೆ.

ರಾಜ್ಯದಲ್ಲಿ ಈವರೆಗೂ ಹಕ್ಕಿ ಜ್ವರದ ಪ್ರಕರಣ ಕಂಡು ಬಂದಿಲ್ಲ. ಅಗತ್ಯ ಮುನ್ನೆಚ್ಚರಿಕೆಗೆ ಸೂಚಿಸಲಾಗಿದೆ. ಕೇರಳ ಗಡಿ ಭಾಗದಲ್ಲಿ ಕೂಡಲೇ ಚೆಕ್‍ಫೋಸ್ಟ್ ಸ್ಥಾಪಿಸಿ ಅಲ್ಲಿಂದ ಬರುವ ಕುಕ್ಕಟ ಉತ್ಪನ್ನಗಳ ಸಾಗಾಣಿಕೆ ನಿರ್ಬಂಧಿಸುವಂತೆ ಸೂಚಿಸಿರುವುದಲ್ಲದೆ ಕೇರಳದಿಂದ ರಾಜ್ಯಕ್ಕೆ ಬರುವ ಕೋಳಿ ಸಾಗಾಣಿಕೆ ವಾಹನಗಳನ್ನು ನೈರ್ಮಲ್ಯೀಕರಿಸಿ ಒಳ ಬಿಡಲು ಸೂಚಿಸಲಾಗಿದೆ.

ಈ ಸಂಬಂಧ ತೆಗೆದುಕೊಂಡ ಕ್ರಮಗಳ ವರದಿಯನ್ನು ಆಯಾ ಉಪ ನಿರ್ದೇಶಕರು, ಕೋಳಿ ರೋಗ ನಿರ್ಣಯ ಪ್ರಯೋಗ ಕಚೇರಿಗೆ ಸಲ್ಲಿಸಬೇಕು. ಗಡಿ ಜಿಲ್ಲೆಗಳಲ್ಲಿ ಪ್ರತಿ ವಾರ ನಿಯಮಿತವಾಗಿ ಕುಕ್ಕಟ ಕ್ಷೇತ್ರಗಳಿಂದ ಐದು ಮಾದರಿಗಳನ್ನು ಸಂಗ್ರಹಿಸಿ ಮುಂದಿನ ಆದೇಶದವರೆಗೂ ಬೆಂಗಳೂರಿನಲ್ಲಿರುವ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ ಪ್ರಯೋಗಾಲಯಕ್ಕೆ ವಿಶ್ಲೇಷಣೆಗಾಗಿ ಸಲ್ಲಿಸಲು ತಿಳಿಸಲಾಗಿದೆ.

ಎಲ್ಲಾ ಜಿಲ್ಲೆಗಳ ಕುಕ್ಕಟ ಕ್ಷೇತ್ರಗಳಲ್ಲಿ ಪಕ್ಷಿಧಾಮ, ನೀರು ಸಂಗ್ರಹಣಾ ಸ್ಥಳಗಳ ಮೇಲೆ ಹೆಚ್ಚಿನ ನಿಗಾವಹಿಸಬೇಕು, ಕೋಳಿಗಳು, ವಲಸೆ ಹಕ್ಕಿಗಳು ಮರಣಹೊಂದಿದರೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಹಾಗೂ ಪ್ರಯೋಗಾಲಯಕ್ಕೆ ವರದಿ ಮಾಡಬೇಕು, ಜತೆಗೆ ಜೈವಿಕ ಸುರಕ್ಷತಾ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.