ತಾಲಿಬಾನ್ ಆತಂಕ, ಭಾರತದ ರಕ್ಷಣೆಗೆ ಮೋದಿ ಸರ್ಕಾರ ಬದ್ಧ : ಜೋಷಿ

ಹುಬ್ಬಳ್ಳಿ, ಆ.17- ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸದಿಂದ ಪರಿಸ್ಥಿತಿ ಹತೋಟಿ ಮೀರಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಕೇಂದ್ರ ಗಣಿ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು. ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಆಫ್ಘಾನಿಸ್ತಾನದಲ್ಲಿರುವ ಭಾರತೀಯರ ರಕ್ಷಣೆಗೆ ನಮ್ಮ ಸರ್ಕಾರ ಎಲ್ಲ ಪ್ರಯತ್ನಗಳನ್ನೂ ನಡೆಸಿದೆ.

ಸದ್ಯ ಅಲ್ಲಿನ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಆಫ್ಘಾನಿಸ್ತಾನದಲ್ಲಿ ಏರೋಸ್ಪೇಸ್‍ಅನ್ನು ಸಹ ಬಂದ್ ಮಾಡಲಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಭಾರತೀಯರನ್ನು ದೇಶಕ್ಕೆ ಕರೆತರುವ ಪ್ರಯತ್ನವನ್ನು ನಮ್ಮ ಸರ್ಕಾರ ಮುಂದುವರಿಸಿದೆ ಎಂದು ಹೇಳಿದರು. ಆಫ್ಘಾನಿಸ್ತಾನದಲ್ಲಿರುವ ಭಾರತದ ಪ್ರತಿಯೊಬ್ಬ ಪ್ರಜೆಯ ಬಗ್ಗೆಯೂ ನಮ್ಮ ಸರ್ಕಾರದ ಕಾಳಜಿ ಇದೆ.

ಮೋದಿ ನೇತೃತ್ವದ ಸರ್ಕಾರ ಎಲ್ಲ ಸಮಸ್ಯೆಗಳನ್ನೂ ನಿಭಾಯಿಸಲು ಶಕ್ತಿಯುತವಾಗಿದೆ ಎಂದು ತಿಳಿಸಿದರು. ಕಳೆದ ಏಳು ವರ್ಷಗಳಲ್ಲಿ ದೇಶದ ಒಳಗೆ ಒಂದೇ ಒಂದು ಉಗ್ರ ಚಟುವಟಿಕೆ ನಡೆಸಲು ಬಿಟ್ಟಿಲ್ಲ. ಗಡಿಯಲ್ಲಿ ಸಣ್ಣಪುಟ್ಟ ಘಟನೆಗಳು ನಡೆದಿರುವುದನ್ನು ಬಿಟ್ಟರೆ ದೇಶದ ಒಳಗೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಉಗ್ರಗಾಮಿಗಳ ವಿಷಯದಲ್ಲಿ ಜೀರೋ ಟಾಲರೆನ್ಸ್ ಘೋಷಣೆ ನಮ್ಮದಾಗಿದೆ.

ಅದಕ್ಕೆ ತಕ್ಕಂತೆ ಸೂಕ್ತ ಬಿಸಿ ಮುಟ್ಟಿಸಲು ನಮ್ಮ ಸರ್ಕಾರ ತಯಾರಿ ಮಾಡಿಕೊಂಡಿದೆ. ಯಾವ ಕಾಲದಲ್ಲಿಯೂ ನಮ್ಮ ಪೊಲೀಸ್ ಬಲ, ಅರೆಸೈನಿಕರ ಸೇನಾಪಡೆಯ ಆತ್ಮಬಲವನ್ನು ಕುಂದಿಸುವ ಪ್ರಯತ್ನ ಮಾಡಿಲ್ಲ ಎಂದರು. ಪೊಲೀಸ್ ಟೆಕ್ನಾಲಜಿಯನ್ನು ಸುಧಾರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.