ಕೆಜಿಎಫ್‍-2 ಚಿತ್ರದಲ್ಲಿ ಪ್ರಕಾಶ್ ರಾಜ್, ಕನ್ನಡಿಗರಿಂದ ಭಾರಿ ವಿರೋಧ..!

Spread the love

ಬೆಂಗಳೂರು, ಆ.28- ಕೆಜಿಎಫ್‍ಗೆ ವಿವಾದ ಸುಳಿಗಳು ಸುತ್ತಿಕೊಳ್ಳುತ್ತಿವೆ, ಈ ಹಿಂದೆ ಅಧೀರನ ಪಾತ್ರಧಾರಿ ಸಂಜಯ್‍ದತ್ ಎಂಟ್ರಿ ಆದಾಗ ಈ ಚಿತ್ರಕ್ಕೆ ಭೂಗತ ಲೋಕದ ನಂಟು ಹೊಂದಿರುವ ವ್ಯಕ್ತಿ ಬೇಕೆ? ಎಂದು ಆಕ್ರೋಶವ್ಯಕ್ತಪಡಿಸಿದರು. ಈಗ ಮತ್ತೊಂದು ವಿವಾದ ಕೂಗು ತಲೆ ಎದ್ದಿದೆ.

ಇದಕ್ಕೆ ಕಾರಣ ಕನ್ನಡ ದ್ರೋಹಿ ಪ್ರಕಾಶ್‍ರಾಜ್ ಎಂಟ್ರಿ. ಕನ್ನಡ ನಾಡಿನ ಚಿತ್ರರಂಗದಲೇ ಬೆಳೆದು ನಂತರ ಪರಭಾಷಾ ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ಅವರು ಸಮಯ ಸಿಕ್ಕಾಗಲೆಲ್ಲಾ ಕನ್ನಡ ನಾಡಿಗೆ ಚ್ಯುತಿ ಬರುವ ರೀತಿ ಮಾತನಾಡಿ , ವಿವಾದ ಸೃಷ್ಟಿಸಿಕೊಂಡಿದ್ದರು.

ಕನ್ನಡ ಚಿತ್ರರಂಗದ ಮೇರೆಯನ್ನು ವಿಶ್ವದಾದ್ಯಂತ ಪ್ರಚರಿಸಲು ಹೊರಟಿರುವ ರಾಕಿಂಗ್‍ಸ್ಟಾರ್‍ರವರ ಕೆಜಿಎಫ್2ಗೆ ಕನ್ನಡ ಬಗ್ಗೆ ಎಳ್ಳಷ್ಟೂ ಪ್ರೀತಿ ಇರದ ಪ್ರಕಾಶ್‍ರಾಜ್‍ರ ಎಂಟ್ರಿ ಬೇಕಾಗಿತ್ತಾ ಎಂಬ ಕೂಗುಗಳು ನೆಟ್ಟಿಗರಿಂದ ಹೊರಬಂದಿದ್ದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ.

ಇನ್ನೊಂದು ಮೂಲದ ಪ್ರಕಾರ ಪ್ರಕಾಶ್‍ರಾಜ್ ಅವರನ್ನು ಕನ್ನಡ ಚಿತ್ರರಂಗದ ಏಳಿಗೆಗೆ ಶ್ರಮಿಸಿರುವ ಅನಂತ್‍ನಾಗ್ ಅವರ ಬದಲಿಗೆ ಕರೆತರಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಕನ್ನಡ ಬಗ್ಗೆ ಒಲುಮೆ ಹೊಂದಿರುವ ಅನಂತ್‍ನಾಗ್ ಬದಲು ಕನ್ನಡ ದ್ರೋಹಿ ಪ್ರಕಾಶ್‍ರೈ ಬೇಕೇ ಎಂಬ ಮಾತುಗಳು ಕೂಡ ಕನ್ನಡಾಭಿಮಾನಿಗಳಿಂದ ಹೊರಬಿದ್ದಿವೆ.

ಒಂದು ವೇಳೆ ಪ್ರಕಾಶ್‍ರಾಜ್‍ರನ್ನು ಚಿತ್ರದಿಂದ ಕೈ ಬಿಡದಿದ್ದರೆ ಚಿತ್ರ ಪ್ರದರ್ಶನಕ್ಕೂ ಅಡ್ಡಿ ಉಂಟು ಮಾಡುತ್ತೇವೆ ಎಂದು ನೆಟ್ಟಿಗರು ಎಚ್ಚರಿಸಿದ್ದಾರೆ. ಈ ಮಧ್ಯೆ ನಿರ್ದೇಶಕ ಪ್ರಶಾಂತ್ ನೀಲ್ ಅವರು ಅನಂತ್‍ನಾಗ್ ಅವರ ಪಾತ್ರದಲ್ಲಿ ಪ್ರಕಾಶ್‍ರಾಜ್ ಅವರನ್ನು ಪ್ರತಿಷ್ಠಾಪಿಸಿಲ್ಲ, ಚಾಪ್ಟರ್ 1ನಲ್ಲಿ ಅನಂತ್‍ನಾಗ್ ಅವರ ರೋಲ್ ಬೇರೆಯಾಗಿತ್ತು.

ಚಾಪ್ಟರ್ 2ನಲ್ಲಿ ಪ್ರಕಾಶ್ ರಾಜ್ ಅವರಿಗೆ ಪ್ರತ್ಯೇಕ ರೋಲ್ ನೀಡಲಾಗಿದೆ ಎಂದು ತಮ್ಮ ಟ್ವಿಟ್ಟರ್ ಖಾತೆ ಮೂಲಕ ಸ್ಪಷ್ಟನೆ ನೀಡಿದ್ದಾರಾದರೂ ಕನ್ನಡಿಗರಲ್ಲಿ ಹೊತ್ತಿರುವ ಕಿಡಿ ಆರಿಲ್ಲ.

ಚಿತ್ರದ ಛಾಯಾಗ್ರಹಕ ಭುವನ್ ಕೂಡ ತಮ್ಮ ಟ್ವಿಟ್ಟರ್ ಮೂಲಕ ಇದಕ್ಕೆ ಸ್ಪಷ್ಟೀಕರಣ ನೀಡಿದ್ದು, ಕೆಜಿಎಫ್ 2ನಲ್ಲಿ ಅನಂತ್‍ನಾಗ್‍ರಷ್ಟೇ ಪ್ರಕಾಶ್‍ರೈಗೂ ಮಹತ್ತರ ಪಾತ್ರವಿದೆಯೇ ಹೊರತು ಅನಂತ್‍ನಾಗ್‍ರ ಜಾಗದಲ್ಲಿ ಪ್ರಕಾಶ್‍ರೈ ಅವರನ್ನು ಕರೆದುಕೊಂಡು ಬಂದಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ನಿರ್ದೇಶಕ ಪ್ರಶಾಂತ್‍ನೀಲ್ ಹಾಗೂ ಛಾಯಾಗ್ರಾಹಕ ಭುವನ್ ಅವರು ಎಷ್ಟೇ ಸಮಜಾಯಿಷಿ ನೀಡಿದರೂ ಕನ್ನಡದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಪ್ರಕಾಶ್‍ರಾಜ್ ಅವರನ್ನು ಕರೆತರುವ ಅವಶ್ಯಕತೆ ಏನಿತ್ತು ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

ಕಳೆದ ಆರು ತಿಂಗಳಿನಿಂದ ಚಿತ್ರೀಕರಣವಿಲ್ಲದೆ ಕಂಗಾಲಾಗಿದ್ದ ಕನ್ನಡ ಚಿತ್ರರಂಗದಲ್ಲಿ ಚಿತ್ರೀಕರಣಕ್ಕೆ ಅನುಮತಿ ದೊರೆತ ನಂತರ ವಿವಾದದ ಕೇಂದ್ರಬಿಂದುವಾಗುತ್ತಿರುವುದು ಚಿತ್ರರಸಿಕರನ್ನು ನಿರಾಸೆಗೊಳಿಸಿದೆ.

Facebook Comments

Sri Raghav

Admin