ವಿದೇಶಿ ಪ್ರಜೆಗಳೇ ತಮ್ಮ ವೀಸಾ ದಾಖಲೆಗಳ ಬಗ್ಗೆ ಎಚ್ಚರ ವಹಿಸಿ

Social Share

ಬೆಂಗಳೂರು,ಜು.29- ವಿದೇಶಿ ಪ್ರಜೆಗಳು ತಮ್ಮ ವೀಸಾ, ಇನ್ನಿತರೆ ದಾಖಲೆಗಳನ್ನು ಯಾವುದೇ ಕಾರಣಕ್ಕು ಅನ್ಯ ವ್ಯಕ್ತಿಗೆ ಹಸ್ತಾಂತರಿಸಬಾರದು ಹಾಗೂ ಭಾರತ ದೇಶದ ಕಾನೂನು ಪ್ರಕಾರ ನಡೆದುಕೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶಿ ಪ್ರಜೆಗೆ ಮನೆ ಬಾಡಿಗೆ ನೀಡುವ ಸಂದರ್ಭದಲ್ಲಿ ಆ ಪ್ರಜೆಯ ಮಾಹಿತಿಯನ್ನು ಮಾಲೀಕರು ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕು ಎಂದು ಸಾರ್ವಜನಿಕರಿಗೆ ಪೊಲೀಸರು ಸೂಚಿಸಿದ್ದಾರೆ.

ಮನೆ ಬಾಡಿಗೆಗೆ ತೆಗೆದುಕೊಂಡ ವಿದೇಶಿ ಪ್ರಜೆಯ ಪಾಸ್ ಪೋರ್ಟ್ ಅಥವಾ ವೀಸಾ, ಇನ್ನಿತರೆ ದಾಖಲೆಗಳ ಪ್ರತಿಯನ್ನು ಪಡೆದು ತಮ್ಮ ಬಳಿ ಇಟ್ಟುಕೊಳ್ಳಬೇಕು. ಈ ನಿಯಮ ಪಾಲನೆ ಮಾಡದ ಪಕ್ಷದಲ್ಲಿ ಬೋಸ್ಕೋ ಕಾವೇಸಿ ಪ್ರಕರಣದ ರೀತಿ ಮನೆ ಮಾಲೀಕರ ಮೇಲೆ ಪ್ರಕರಣ ದಾಖಲು ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.

ಆರೋಪಿ ಗಡಿ ಪಾರು:

ಮಾನವ ಕಳ್ಳಸಾಗಾಣೆ, ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ವಿದೇಶಿ ಪ್ರಜೆಗಳ ವೀಸಾ ಮತ್ತು ಪಾಸ್ ಪೋರ್ಟ್ ನವೀಕರಿಸಲು ಸಹಕರಿಸುತ್ತಿದ್ದ ವಿದೇಶಿ ಆರೋಪಿಯನ್ನು ಗಡಿಪಾರು ಮಾಡಿದ್ದು, ಮರಳಿ ಭಾರತಕ್ಕೆ ಪ್ರವೇಶಿಸದಂತೆ ನಿಷೇಧ ಹೇರಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ಭಾರತ ಸರ್ಕಾರದ ಗೃಹ ಮಂತ್ರಾಲಯ ಹಾಗೂ ನಗರ ಪೊಲೀಸರ ಜಂಟಿ ಕಾರ್ಯಾಚರಣೆ ವೇಳೆ ನಗರದಲ್ಲಿ ಅನಧಿಕೃತವಾಗಿ ವಾಸವಾಗಿದ್ದ ಉಗಾಂಡ ಪ್ರಜೆ ಬೋಸ್ಕೋ ಕಾವೇಸಿ ಎಂಬಾತನನ್ನು ವಶಕ್ಕೆ ಪಡೆದು ತಾತ್ಕಾಲಿಕ ಬಂಧನ ಕೇಂದ್ರಕ್ಕೆ ಕಳುಹಿಸಲಾಗಿದೆ.

ಈತ ವೈಯಕ್ತಿಕ ಲಾಭದ ಉದ್ದೇಶಕೋಸ್ಕರ 2005ರಿಂದ ಅನಧಿಕೃತವಾಗಿ 16 ವರ್ಷಗಳ ಕಾಲ ವಾಸವಾಗಿದ್ದುಕೊಂಡು ವಿದೇಶಿಯರಿಗೆ ಅನುಕೂಲ ಮಾಡಿಕೊಡುವುದಾಗಿ ನಂಬಿಸಿ ಅನವಶ್ಯಕವಾಗಿ ಅವರಿಂದ ಹಣ ಪಡೆದುಕೊಳ್ಳುತ್ತಿದ್ದನು.

ಅಲ್ಲದೆ, ಅನಧಿಕೃತವಾಗಿ ನೆಲೆಸಿರುವ ವಿದೇಶಿಯರಿಗೆ ನಕಲಿ ದಾಖಲಾತಿಗಳನ್ನು ನೀಡಿ ಇಮಿಗ್ರೇಷನ್ ಸೇವೆ ಪಡೆದುಕೊಳ್ಳಲು ಅವರಿಗೆ ಅನುಕೂಲ ಮಾಡಿಕೊಟ್ಟು ಗಂಭೀರ ಸಮಸ್ಯೆಯಲ್ಲಿ ಸಿಲುಕಿಸುತ್ತಿದ್ದನು.
ಈತ 2006ರಲ್ಲಿ ಭಾರತದಲ್ಲಿ ಅನಧಿಕೃತವಾಗಿ ವಾಸವಾಗಿದ್ದ ಸಂಬಂಧ ಆರು ತಿಂಗಳ ಸಜೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಬಿಟ್ಟು ಹೋಗಲು ನೋಟಿಸ್ ನೀಡಿದ್ದರ ಹೊರತಾಗಿಯೂ ಆದೇಶವನ್ನು ಪಾಲಿಸದೆ ನಗರದಲ್ಲಿ ಅನಧಿಕೃತವಾಗಿ ವಾಸವಾಗಿದ್ದನು.

ಈತ ಮಾನವ ಕಳ್ಳ ಸಾಗಾಣೆ, ಬಲವಂತವಾಗಿ ಹಣ ಪಡೆದು ಹೆದರಿಸುವುದು, ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ವಂಚಿಸುವುದರ ಜತೆಗೆ ಇತರೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡು ವಿದೇಶಿಯರಿಗೆ ಭಾರತದಲ್ಲಿ ನೆಲೆಸಲು ಪೊಲೀಸ್ ಹಾಗೂ ಇಮಿಗ್ರೇಷನ್ ವತಿಯಿಂದ ಅನುಕೂಲ ಮಾಡಿಕೊಡುವುದಾಗಿ ನಂಬಿಸಿ ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ.
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಬೋಸ್ಕೋ ಭಾಗಿಯಾಗಿರುವ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದು, ಈತನಿಗೆ ಸಹಾಯ ಮಾಡಿದ ವಿದೇಶಿಯರು ಹಾಗೂ ಭಾರತೀಯರ ಬಗ್ಗೆಯೂ ಸಹ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

ಈತ ವಾಸ ಮಾಡಲು ಮನೆ ಕೊಟ್ಟಿರುವ ಮಾಲೀಕರು ವಿದೇಶಿಯರ ಕಾಯ್ದೆ ಪ್ರಕಾರ ಸಂಬಂಧಪಟ್ಟ ಠಾಣೆ ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡದೆ ಇದ್ದುದ್ದರಿಂದ ಮನೆ ಮಾಲೀಕನ ಮೇಲೆ ವಿದೇಶಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ಆತ ವಾಸವಾಗಿದ್ದ ಬಾಡಿಗೆ ಮನೆಯನ್ನು ನ್ಯಾಯಾಲಯದ ಸರ್ಚ್ ವಾರೆಂಟ್ ಪಡೆದು ಪರಿಶೀಲನೆ ಮಾಡಲಾಗಿದ್ದು, 26 ವಿದೇಶಿಯರ ಪಾಸ್ ಪೋರ್ಟ್ ಗಳು ಪತ್ತೆಯಾಗಿವೆ. ಅವುಗಳ ಪೈಕಿ 24 ಮಂದಿ ಮಹಿಳೆಯರು ಮತ್ತು ಇಬ್ಬರು ಪುರುಷರ ಪಾಸ್ ಪೋರ್ಟ್ , ಡೆಲ್ ಕಂಪೆನಿಯ ಲ್ಯಾಪ್ಟಾಪ್, ಡಿಎಲ್, ಬೋಸ್ಕೋ ಹೆಸರಿನಲ್ಲಿನ ಸ್ಟೇಟ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಮತ್ತು ಸಿಂಡಿಕೇಟ್ ಬ್ಯಾಂಕ್ನ ಪಾಸ್ಬುಕ್ಗಳು, ಪ್ರಿಂಟರ್, ಕಂಪ್ಯೂಟರ್, ವಿದೇಶಿಯರ ಪಾಸ್ ಪೊೀರ್ಟ್ಗಳು, ವೀಸಾಗಳ ಜರಾಕ್ಸ್ ಪ್ರತಿಗಳು ಪತ್ತೆಯಾಗಿವೆ.

26 ವಿದೇಶಿಯರಲ್ಲಿ 24 ವಿದೇಶಿಯರ ವೀಸಾ ಅವ ಮುಗಿದಿರುವುದು ಕಂಡು ಬಂದಿದೆ. ಹಾಗೂ ಇನ್ನಿಬ್ಬರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಈ 26 ವಿದೇಶಿಯರು ಬಾಣಸವಾಡಿ ಪೊಲೀಸ್ ಠಾಣೆಗೆ ತೆರಳಿ ತಮ್ಮ ಪಾಸ್ ಪೋರ್ಟ್ ಪಡೆದುಕೊಳ್ಳಬೇಕಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Articles You Might Like

Share This Article