ಸಂಸದೆ ಸುಮಲತಾಗೆ ಟಾಂಗ್ ಕೊಟ್ಟ ಪ್ರತಾಪ್ ಸಿಂಹ

ಮೈಸೂರು, ಜು. 8- KRS ಡ್ಯಾಂನಲ್ಲಿ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಸಂಸದ ಪ್ರತಾಪ್ ಸಿಂಹ, KRS ಡ್ಯಾಂ ಬಿರುಕು ಬಿಟ್ಟಿಲ್ಲ ಎಂದು ಅಧಿಕಾರಿಗಳೇ ತಿಳಿಸಿದ್ದಾರೆ. ಅಂಥಹದರಲ್ಲಿ ಡ್ಯಾಂ ಬಿರುಕು ಬಿಟ್ಟಿದೆ ಅನ್ನೋದು ಸರಿಯಲ್ಲ ಎಂದು ಪರೋಕ್ಷವಾಗಿ ಸಂಸದೆ ಸುಮಲತಾಗೆ ಟಾಂಗ್ ಕೊಟ್ಟಿದ್ದಾರೆ.

ಅಕ್ರಮ ಗಣಿಗಾರಿಕೆ ಸ್ಥಳಗಳಲ್ಲಿ ಸಂಸದೆ ಸುಮಲತಾರಿಗೆ ಅಡ್ಡಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಅವರ ಹೇಳಿಕೆಯನ್ನೇ ಮಾಧ್ಯಮದವರು ಸತ್ಯ ಎಂದು ಭಾವಿಸಬೇಡಿ. ಸತ್ಯದ ಆಳಕ್ಕೆ ಹೋಗಿ ತಿಳಿದುಕೊಳ್ಳುವ ಮನಸ್ಥಿತಿ ಮಾಧ್ಯಮದವರಿಗೆ ಇರಬೇಕಾಗುತ್ತದೆ. ರಾಜಕೀಯವಾಗಿ ಯಾರೇ ಏನ್ ಬೇಕಾದರೂ ಹೇಳಿಕೆ ಕೊಡಬಹುದು. ಯಾರು ಕೂಡ ಎಲ್ಲಿಯೂ ಅಡ್ಡಿ ಪಡಿಸಿಲ್ಲ. ಇದೊಂದು ರಾಜಕೀಯ ಅಷ್ಟೇ ಎಂದರು.

KRSಅಧಿಕಾರಿಗಳ ಜೊತೆ ನಾನು ಮಾತನಾಡಿದ್ದೇನೆ. ಅಲ್ಲಿ ಯಾವ ಸಮಸ್ಯೆಯೂ ಇಲ್ಲ. ಅಲ್ಲಿಯ ಅಧಿಕಾರಿಗಳೇ ನನಗೆ ಮಾಹಿತಿ ನೀಡಿದ್ದಾರೆ ಎಂದರು. ಈ ಹಿಂದೆಯೂ ಕೂಡ ಮೈಸೂರು-ಬೆಂಗಳೂರು ದಶಪಥ ರಸ್ತೆ ಮಾಡುವುದಕ್ಕೂ ಬಿಡಲಿಲ್ಲ. ಸುಳ್ಳು ನೆಪಗಳನ್ನ ಹೇಳಿ ಕೆಲಸ ಮಾಡಲು ಅಡ್ಡಿಪಡಿಸಿದರು ಎಂದು ಸಂಸದ ಪ್ರತಾಪ್ ಸಿಂಹ ಪರೋಕ್ಷವಾಗಿ ಸುಮಲತಾ ಅಂಬರೀಶ್ ವಿರುದ್ದ ಆರೋಪ ಮಾಡಿದರು.

ಕೊರೊನಾ 3ನೇ ಅಲೆ ಕುರಿತು ಸಿಎಂ ಎಚ್ಚರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಎಚ್ಚರಿಕೆಯನ್ನ ಗಂಭೀರವಾಗಿ ಪರಿಣಗಣಿಸಿಬೇಕು. ಪಕ್ಕದ ಕೇರಳದಲ್ಲಿ ಕೊರೊನಾ ಜಾಸ್ತಿಯಾಗಿದೆ. ಜನರು ಕೂಡ ಎಚ್ಚರಿಕೆಯಿಂದ ಇರಬೇಕು. ಕೊರೊನಾ ನಿಯಂತ್ರಣಕ್ಕೆ ಜನರ ಸಹಕಾರ ಕೂಡಾ ಮುಖ್ಯ ಎಂದರು.