ಸಚಿವರು ಸರ್ಕಾರದ ಪರವಾಗಿ ಉತ್ತರ ಕೊಡಬೇಕು

ಬೆಂಗಳೂರು, ಫೆ.2- ಸಚಿವರು ಸರ್ಕಾರದ ಪರವಾಗಿ ಉತ್ತರ ಕೊಡಬೇಕು. ಸಮಸ್ಯೆಗಳನ್ನೇ ಮುಂದೆ ಮಾಡಿ ಮಾತನಾಡಬಾರದು ಎಂದು ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ತಾಕೀತುಮಾಡಿದ ಪ್ರಸಂಗ ವಿಧಾನಪರಿಷತ್‍ನಲ್ಲಿ ನಡೆಯಿತು. ಸದಸ್ಯ ಸುನೀಲ್‍ಸುಬ್ರಹ್ಮಣ್ಯ ಅವರು, ಮಡಕೇರಿ ನಗರದಲ್ಲಿ ಉತ್ಪತ್ತಿಯಾಗುವ ಒಳಚರಂಡಿ ನೀರನ್ನು ಸಂಸ್ಕರಿಸಲಾಗುತ್ತಿಲ್ಲ ಎಂದು ಆಕ್ಷೇಪಿಸಿದಾಗ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಮಾತನಾಡಿ, ಸಂಸ್ಕರಣಾ ಘಟಕ ಸ್ಥಾಪಿಸಲು ಜಾಗದ ಕೊರತೆ ಇದೆ. ಅಲ್ಲಿನ ಜಿಲ್ಲಾಡಳಿತ ನಮಗೆ ಸ್ಪಂದಿಸುತ್ತಿಲ್ಲ.

ಜಾಗ ಕೊಟ್ಟರೆ ಕೂಡಲೇ ಒಳಚರಂಡಿ ನೀರನ್ನು ಸಂಸ್ಕರಿಸಿ ಘಟಕ ಸ್ಥಾಪಿಸಲಾಗುವುದು ಎಂದು ಹೇಳಿದ್ದಲ್ಲದೆ, ತಾವು ಅಧಿವೇಶನದ ಬಳಿಕ ಮಡಿಕೇರಿಗೆ ಭೇಟಿ ನೀಡಿ ಮತ್ತೊಂದು ಸುತ್ತಿನ ಸಭೆ ನಡೆಸುವುದಾಗಿ ಹೇಳಿದರು.

ಆಗ ಸಭಾಪತಿಯವರು ಮಧ್ಯ ಪ್ರವೇಶ ಮಾಡಿ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ ಎಂದು ಹೇಳಿದರೆ ಅದು ಸಚಿವರ ಉತ್ತರ ಅಲ್ಲ. ನೀವು ಸರ್ಕಾರದ ಪರವಾಗಿ ಮಾತನಾಡಬೇಕು. ನಿಮ್ಮ ಸಮಸ್ಯೆಗಳನ್ನೇ ಹೇಳಿಕೊಳ್ಳಬಾರದು ಎಂದರು.