ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ವಶಕ್ಕೆ

Social Share

ಬೆಂಗಳೂರು,ಜು.29- ಸುಳ್ಯದ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಸವಣೂರಿನ ಜಾಕೀರ್ ಹಾಗೂ ಬೆಳ್ಳಾರೆಯ ಮೊಹಮ್ಮದ್ ಶಫಿಕ್ನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದೀಗ ಸದ್ದಾಂ ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೊಳಪಡಿಸಿ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಉಳಿದ ಆರೋಪಿಗಳಿಗಾಗಿ ಐದು ತಂಡಗಳು ಶೋಧ ನಡೆಸುತ್ತಿವೆ. ಒಂದು ತಂಡ ಕೇರಳಕ್ಕೆ ಹೋಗಿದ್ದರೆ, ಮತ್ತೊಂದು ತಂಡ ಗೋವಾಗೆ ತೆರಳಿದೆ. ಉಳಿದ ಮೂರು ತಂಡಗಳು ವಿವಿಧೆಡೆ ತೆರಳಿದ್ದು, ಆರೋಪಿಗಳ ಪತ್ತೆಗೆ ಮಾಹಿತಿ ಕಲೆ ಹಾಕುತ್ತಿದೆ.

ಪ್ರವೀಣ್ ಇತ್ತೀಚೆಗೆ ಮಾಂಸ ಉದ್ಯಮ ಆರಂಭಿಸಲು ಹಿಂದೂಗಳಿಗೆ ಪ್ರೇರೇಪಿಸುತ್ತಿದ್ದ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಕೋಳಿ, ಮೀನು, ಮಟನ್ ಅಂಗಡಿ ತೆರೆಯುವಂತೆ ಹಿಂದೂಗಳಿಗೆ ಪ್ರವೀಣ್ ಉತ್ತೇಜನ ನೀಡುತ್ತಿದ್ದನು. ಆ ಕಾರಣಕ್ಕೆ ಈತನನ್ನು ಹತ್ಯೆ ಮಾಡಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಇತ್ತೀಚೆಗೆ ಮೀನಿನ ಟೆಂಡರ್ ಪಡೆಯಲು ಹಿಂದೂಗಳಿಗೆ ಪ್ರೇರೇಪಿಸಿದ್ದ. ಅಲ್ಲದೆ ಕೆಲವರಿಗೆ ಟೆಂಡರ್ ಸಹ ಕೊಡಿಸಿದ್ದರು. ಈ ಒಂದು ಅಂಶವೂ ಆತನ ಕೊಲೆಗೆ ಕಾರಣ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಇತ್ತೀಚೆಗೆ ಪ್ರವೀಣ್ ಕೋಳಿ ಅಂಗಡಿ ತೆರೆದಿದ್ದರಿಂದ ಇದು ಕೆಲವರು ಈತನೊಂದಿಗೆ ವೈಷಮ್ಯ ಸಾಸಿದ್ದರೆಂಬ ಮಾಹಿತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರವೀಣ್ ಅನ್ಯ ಕೋಮಿನೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದನು ಎನ್ನಲಾಗಿದ್ದು, ಒಟ್ಟಾರೆ ಈತನ ಹತ್ಯೆಗೆ ಪ್ರಮುಖ ಕಾರಣವನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

Articles You Might Like

Share This Article