ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಅರೆಸ್ಟ್

Social Share

ಬೆಂಗಳೂರು,ಆ.2-ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಬೆಳ್ಳಾವೆಯ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಈ ಪ್ರಕರಣದಲ್ಲಿ ಯಾರೆಲ್ಲ ಶಾಮೀಲಾಗಿದ್ದರೋ ಅವರೆಲ್ಲರನ್ನೂ ಮಿಂಚಿನ ಕಾರ್ಯಾಚರಣೆ ನಡೆಸಿ ನಮ್ಮ ಪೊಲೀಸರು ಬಂಧಿಸಿದ್ದಾರೆ. ಕೊಲೆಯನ್ನು ಯಾವ ಕಾರಣಕ್ಕಾಗಿ ನಡೆಸಿದ್ದಾರೆ, ಇದರಲ್ಲಿ ಯಾರು ಶಾಮೀಲಾಗಿದ್ದಾರೆ ಎಂಬುದು ಗೊತ್ತಿದೆ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಏಕೆಂದರೆ ಇದು ತನಿಖೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಯಾರು ಕೃತ್ಯದಲ್ಲಿ ಭಾಗಿಯಾಗಿದ್ದಾರೋ ಅವರನ್ನು ವಿಚಾರಣೆ ನಡೆಸಿ ಬಂಧಿಸಲಾಗಿದೆ. ಈಗಲೇ ನಾನು ಏನೂ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಪ್ರಕರಣದಲ್ಲಿ ನಮ್ಮ ಪೊಲೀಸರು ಅನಗತ್ಯವಾಗಿ ಯಾವುದೇ ಅಮಾಯಕ ವ್ಯಕ್ತಿಗಳನ್ನು ಬಂಧಿಸಿಲ್ಲ. ತನಿಖೆ ವೇಳೆ ಅಧಿಕಾರಿಗಳು ನಿಖರವಾದ ಮಾಹಿತಿ ಸಂಗ್ರಹಿಸಿ ಬಂಧಿಸಿದ್ದಾರೆ. ಫಾಜಿಲ್ ಪ್ರಕರಣದಲ್ಲೂ ತನಿಖೆ ಮುಂದುವರೆದಿದೆ. ಅದೇ ರೀತಿ ಮಸೂದ್ ಕೊಲೆ ಪ್ರಕರಣದಲ್ಲಿ ಯಾರು ಶಾಮೀಲಾಗಿದ್ದಾರೋ ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ ಎಂದರು.


ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ಅರಗ ಜ್ಞಾನೇಂದ್ರ, ಅವರು ಅಧಿಕಾರದಲ್ಲಿ ಇದ್ದಾಗ ಮಾಡಬಾರದನ್ನೆಲ್ಲಾ ಮಾಡಿದ್ದಾರೆ. ಈಗ ಫೋಸ್ ಕೊಡಲು ಹೊರಟ್ಟಿದ್ದಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯನವರಿಂದಲೇ ಕಾನೂನು ಸುವ್ಯವಸ್ಥೆ ಹದಗೆಟ್ಟು ಈಗ ನಾವು ಅನುಭವಿಸುತ್ತಾ ಇದ್ದೇವೆ. ಅಲ್ಪಸಂಖ್ಯಾತ ಮತಾಂಧ ಶಕ್ತಿಗಳ ಮೇಲೆ ಇದ್ದ ಕೇಸ್‍ನ್ನೆಲ್ಲಾ ವಿತ್ ಡ್ರಾ ಮಾಡಿ, ಮತಾಂದ ಶಕ್ತಿ ಬೆಳೆಸಿಟ್ಟಿದ್ದಾರೆ ಎಂದು ಆರೋಪಿಸಿದರು.
ಇಂದು ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಅವರೇ ಟೀಕೆ ಮಾಡುತ್ತಾರೆ. ಇದಕ್ಕೆ ಸಿದ್ದರಾಮಯ್ಯನವರೇ ಕಾರಣ. ಜನರು ಇದನ್ನು ಮರೆಯುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Articles You Might Like

Share This Article