ಬೆಂಗಳೂರು,ಜು.28- ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇದುವರೆಗೂ ಹದಿನೈದಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‍ಕುಮಾರ್ ಹೇಳಿದರು.
ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಳ್ಳಾರೆಯಲ್ಲಿರುವ ಎಡಿಜಿಪಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮಂಗಳೂರು ಪೊಲೀಸ್ ಆಯುಕ್ತರು ಹಾಗೂ ಉಡುಪಿ ಪೊಲೀಸರ ಉಸ್ತುವಾರಿಯಲ್ಲಿ ಪ್ರವೀಣ್ ಹತ್ಯೆ ಸಂಬಂಧ ರಚಿಸಲಾಗಿರುವ ಆರು ಪೊಲೀಸ್ ತಂಡಗಳು ಈಗಾಗಲೇ ಕಾರ್ಯೋನ್ಮುಖವಾಗಿ ತನಿಖೆ ನಡೆಸುತ್ತಿವೆ ಎಂದರು.
ಆರೋಪಿಗಳ ಪತ್ತೆಗೆ ಪೊಲೀಸ್ ಅಧಿಕಾರಿಗಳಿಗೂ ಅವಕಾಶ ಕೊಡಬೇಕು ಎಂದು ಅವರು ಮನವಿ ಮಾಡಿದರು. ಈಗಾಗಲೇ ಪೊಲೀಸರ ವಶದಲ್ಲಿರುವವರು ಕೃತ್ಯದಲ್ಲಿ ಪ್ರತ್ಯಕ್ಷವಾಗಿ ಭಾಗಿಯಾದವರೇ ಅಥವಾ ಪರೋಕ್ಷವಾಗಿ ಸಹಕರಿಸಿದವರೇ ಎಂಬುದು ಸದ್ಯಕ್ಕೆ ಹೇಳಲು ಅಸಾಧ್ಯ. ವಿಚಾರಣೆ ಹಂತದಲ್ಲಿದ್ದು, ಆರೋಪಿಗಳನ್ನು ಬಂಧಿಸಿದ ನಂತರವಷ್ಟೇ ಹತ್ಯೆಗೆ ನಿಖರ ಕಾರಣ ತಿಳಿಸುವುದಾಗಿ ಅವರು ಹೇಳಿದರು.
ಪ್ರವೀಣ್ ಹತ್ಯೆಗೆ ಮೂರ್ನಾಲ್ಕು ಕಾರಣಗಳು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ, ನಿಖರ ಕಾರಣವೇನೆಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಪರಿಸ್ಥಿತಿ ಹತೋಟಿಗಾಗಿ ಲಾಠಿ ಚಾರ್ಜ್:
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ಹತ್ಯೆಯಾಗಿರುವ ಸುದ್ದಿ ತಿಳಿದು ಸ್ಥಳಕ್ಕೆ ಸಂಸದರು, ಸಚಿವರು ಬಂದಿದ್ದಾಗ ಜನರು ಭಾವೋದ್ವೇಗಕ್ಕೆ ಒಳಗಾಗಿ ವಾಹನವನ್ನು ತಳ್ಳಲು ಯತ್ನಿಸಿದರು. ಪರಿಸ್ಥಿತಿ ಹತೋಟಿಗೆ ತರುವ ಉದ್ದೇಶದಿಂದ ಲಾಠಿ ಪ್ರಹಾರ ಮಾಡಬೇಕಾಯಿತು ಎಂದು ಅವರು ಹೇಳಿದರು.
144 ಸೆಕ್ಷನ್ ಜಾರಿ: ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪರಿಸ್ಥಿತಿ ಹತೋಟಿಯಲ್ಲಿದ್ದು, ಯಾರೂ ಗುಂಪು ಕಟ್ಟಿಕೊಂಡು ಓಡಾಡಬಾರದು ಎಂದು ಅವರು ಸೂಚನೆ ನೀಡಿದರು.