ಮಂಗಳೂರು,ಆ.11- ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳನ್ನು ತಲಪಾಡಿ ಚೆಕ್‍ಪೋಸ್ಟ್ ಬಳಿ ಬಂಧಿಸಲಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಮೂವರು ಆರೋಪಿಗಳಿಗೆ ಆಶ್ರಯ ನೀಡಿದ ಮೂವರು ಮಹಿಳೆಯರು ಸೇರಿ 9 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದರು. ಹಂತಕರು ಎಂದು ಗೊತ್ತಿದ್ದರೂ ಅವರಿಗೆ ಆಶ್ರಯ, ಹಣ, ಊಟ ಸಹಾಯ ಮಾಡಿರುವ ಬಗ್ಗೆಯೂ ಅವರುಗಳಿಂದ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಆರೋಪಿಗಳಿಗೆ ನೆರವಾದವರ ಮೇಲೂ ಎನ್‍ಐಎ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಆರೋಪಿಗಳು ಯಾವ ಕಾರಣಕ್ಕಾಗಿ ಪ್ರವೀಣ್‍ನನ್ನು ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸುತ್ತೇವೆ. ಆರೋಪಿಗಳು ಪ್ರವೀಣ್ ಹತ್ಯೆಗೆ ಬಳಸಿದ್ದ ಮಾರಕಾಸ್ತ್ರಗಳು, 4 ಬೈಕ್ ಹಾಗು ಒಂದು ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.
ಹಂತಕರು ಅಂದು ಪ್ರವೀಣ್‍ನನ್ನು ಕೊಲೆ ಮಾಡಿ ಕಾಸರಗೋಡಿಗೆ ಹೋಗಿ ಅಲ್ಲಿನ ಪ್ರಾರ್ಥನಾ ಮಂದಿರವೊಂದರಲ್ಲಿ ಆಶ್ರಯ ಪಡೆದಿದ್ದರು. ನಂತರ ಅಲ್ಲಿಂದ ಎಲ್ಲಿಗೆ ಹೋಗಿದ್ದರು ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಈ ಎಲ್ಲ ವಿಚಾರಗಳನ್ನು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗುತ್ತದೆ ಎಂದರು.
ಮೊದಲು ಬಂಧಿತರ ವಿಚಾರಣೆಯಾಗಬೇಕು. ನಮಗೆ ಮಾಹಿತಿ ಸಿಗಬೇಕು. ಈ ಹಂತದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು. ಬಂಧಿತರಾಗಿರುವ ಆರೋಪಿಗಳಿಗೆ ಪಿಎಫ್‍ಐ ಹಾಗು ಎಸ್‍ಡಿಪಿಐ ಜೊತೆ ಸಂಬಂಧವಿರುವ ಶಂಕೆಯಿದೆ. ಆದರೆ ಇವರುಗಳ ಮೇಲೆ ಹಳೆಯ ಕೇಸ್ ಯಾವುದೂ ಇಲ್ಲ ಎಂದು ತಿಳಿಸಿದರು.
ಎನ್‍ಐಎ ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದೆ. ನಮ್ಮ ಬಳಿ ಇರುವ ಮಾಹಿತಿಯನ್ನು ಅವರಿಗೆ ಕೊಡುತ್ತೇವೆ. ತನಿಖೆಗೆ ಸಹಕರಿಸಿರುವ ಚಿಕ್ಕಮಗಳೂರು, ಮಂಡ್ಯ, ಶಿವಮೊಗ್ಗ ಪೊಲೀಸ್ ಅಧಿಕಾರಿಗಳು ಹಾಗೂ ಸಿಐಡಿ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಲು ಸಹಕರಿಸಿರುವ ಎಲ್ಲಾ ತಂಡಗಳನ್ನು ಡಿಜಿ ಅವರು ಅಭಿನಂದಿಸಿದ್ದಾರೆ. ನಾನು ಸಹ ವೈಯಕ್ತಿಕವಾಗಿ ಅವರ ಕಾರ್ಯವನ್ನು ಶ್ಲಾಘಿಸುತ್ತೇನೆ ಎಂದರು.
ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮಿಸಿದ ತಂಡಕ್ಕೆ ಬಹುಮಾನ ನೀಡುವುದಾಗಿ ಅವರು ಇದೇ ವೇಳೆ ತಿಳಿಸಿದರು.