ಪ್ರವೀಣ್ ನೆಟ್ಟಾರು ಹತ್ಯೆ : ಕೇರಳದಲ್ಲಿ ಮೂರು ಹಂತಕರ ಬಂಧನ

Social Share

ಮಂಗಳೂರು, ಆ.11- ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕೇರಳದಲ್ಲಿ ಈ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಮಂಗಳೂರಿಗೆ ಕರೆತಂದು ಗೌಪ್ಯ ಸ್ಥಳದಲ್ಲಿರಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವಮುಖಂಡ ಪ್ರವೀಣ್ ನೆಟ್ಟಾರು(32) ಅವರು ಜುಲೈ 26ರಂದು ರಾತ್ರಿ ತಮ್ಮ ಕೋಳಿ ಅಂಗಡಿ ಮುಚ್ಚುತ್ತಿದ್ದಾಗ ವ್ಯವಸ್ಥಿತ ಸಂಚು ರೂಪಿಸಿ ಎರಡು ಬೈಕ್‍ಗಳಲ್ಲಿ ಬಂದ ಮುಸುಕು ದಾರಿ ದುಷ್ಕರ್ಮಿಗಳು ಏಕಾಏಕಿ ಪ್ರವೀಣ್ ಮೇಲೆ ದಾಳಿ ಮಾಡಿ ಮಚ್ಚು, ಲಾಂಗ್‍ಗಳಿಂದ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು.

ಅಂದಿನಿಂದ ಆರೋಪಿಗಳ ಪತ್ತೆಗಾಗಿ ಪೊಲೀಸರು ಐದು ತಂಡಗಳನ್ನಾಗಿ ಮಾಡಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದು, ಆರೋಪಿಗಳು ರಾಜ್ಯದ ವಿವಿಧ ಕಡೆಗಳಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಮಂಡ್ಯ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಒಂದೊಂದು ತಂಡ ಒಂದೊಂದು ಜಿಲ್ಲೆಗೆ ತೆರಳಿ ಆರೋಪಿಗಳಿಗಾಗಿ ಬಲೆ ಬೀಸಿದ್ದರು.

ತನಿಖಾ ಸಂದರ್ಭದಲ್ಲಿ ಸವಣೂರು ಮೂಲದ ಜಾಕೀರ ಮತ್ತು ಬೆಳ್ಳಾರೆ ಮೂಲದ ಶಫೀಕ್‍ನನ್ನು ಕಾಸರಗೋಡಿನಲ್ಲಿ ಬಂಸಲಾಗಿತ್ತು. ಈ ಇಬ್ಬರು ಪ್ರವೀಣ್ ಹತ್ಯೆಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದರು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿತ್ತು.

ತನಿಖಾ ಸಂದರ್ಭದಲ್ಲಿ ದುಷ್ಕರ್ಮಿಗಳು ಬಯಸಿದ್ದ ಬೈಕ್ ನಂಬರ್ ಕೇರಳ ನೊಂದಣಿ ಸಂಖ್ಯೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ತನಿಖೆ ಮುಂದುವರೆಸಿ, ಆರೋಪಿಗಳಿಗೆ ಬೈಕ್ ನೀಡಿದ್ದ ಸುಳ್ಯದ ಕಬೀರ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಕಬೀರ್ ತನ್ನ ಪರಿಚಯಿಸ್ಥನಿಂದ ಬೈಕ್ ಪಡೆದು ಅದನ್ನು ಹಂತಕನಿಗೆ ನೀಡಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ.

ಈ ಪ್ರಕರಣದಲ್ಲಿ ಮತ್ತೆ ಸ್ಥಳೀಯರಾದ ಅಬೀಬ್, ನೌಫಾಲ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಮಾಹಿತಿಗಳನ್ನು ಸಂಗ್ರಹಿಸಿದ್ದು, ಈ ಪ್ರಕ್ರಣದಲ್ಲಿ ಒಟ್ಟಾರೆ ಈಗಾಗಲೇ ಆರು ಮಂದಿಯನ್ನು ಬಂಧಿಸಿದ್ದರು.

ಪ್ರಮುಖ ಮೂವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದರು. ಆರೋಪಿಗಳಿಗೆ ಕೇರಳ ಲಿಂಕ್ ಇರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಆ ನಿಟ್ಟಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಕೊನೆಗೂ ಮೂವರು ಪ್ರಮುಖ ಆರೋಪಿಗಳ ಎಡೆಮುರಿ ಕಟ್ಟಿದ್ದಾರೆ.

Articles You Might Like

Share This Article