ಮಂಗಳೂರು,ಆ.8- ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್‍ಐಎ ತಂಡ ದೆಹಲಿ ಕಚೇರಿಯಲ್ಲಿ ಎಫ್‍ಐಆರ್ ದಾಖಲಿಸಿ ಅಧಿಕೃತವಾಗಿ ತನಿಖೆ ಆರಂಭಿಸಿದೆ. ಈಗಾಗಲೇ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಬಂಧಿಸಿದ ಆರೋಪಿಗಳು ಸೇರಿ ನಾಪತ್ತೆಯಾದವರ ಮೇಲೂ ಎನ್‍ಐಎ ತಂಡ ಎಫ್‍ಐಆರ್ ದಾಖಲಿಸಿದೆ.
ಜೊತೆಗೆ ಈ ಎಫ್‍ಐಆರ್ ಪ್ರತಿಯನ್ನು ಕೋಟ್ರ್ಗೆ ಸಲ್ಲಿಸಿದ್ದು, ಐಪಿಸಿ 302, 34 ಸೇರಿ ಹಲವು ಕಲಂಗಳಡಿ ಎಫ್‍ಐಆರ್ ದಾಖಲಾಗಿದೆ. ಪ್ರವೀಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಎನ್‍ಐಎ ತಂಡ ತನಿಖೆ ಪ್ರಾರಂಭಿಸಿದ್ದು, ಈಗಾಗಲೇ ಸುಳ್ಯ, ಪುತ್ತೂರಿನಲ್ಲಿ ಬೀಡುಬಿಟ್ಟಿದೆ. ಅಷ್ಟೇ ಅಲ್ಲದೇ ತನಿಖೆಯನ್ನು ಚುರುಕುಗೊಳಿಸಿದ್ದು, ನಾಪತ್ತೆಯಾಗಿರುವ ಆರೋಪಿಗಳಿಗೆ ಶೋಧ ಕಾರ್ಯ ಆರಂಭಿಸಿದೆ.
ಬೆಳ್ಳಾರೆ ಪೊಲೀಸರಿಂದ ಕೇಸ್ ಫೈಲ್ ಪಡೆದು ತನಿಖೆ ಆರಂಭಿಸಿರುವ ಎನ್‍ಐಎ ತಂಡ ಮೃತನ ಕುಟುಂಬದವರ ಹೇಳಿಕೆ, ದೂರುದಾರನ ಹೇಳಿಕೆಗಳು ಹಾಗೂ ಪೊಲೀಸರು ಸಂಗ್ರಹಿಸಿದ ಸಿಸಿಟಿವಿಗಳನ್ನು ಪರಿಶೀಲಿಸಿದೆ. ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ಕೂಲಂಕುಷವಾಗಿ ಮಾಹಿತಿ ಕಲೆ ಹಾಕಿದ್ದು, ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದೆ.
ಭಾನುವಾರ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಸುಳ್ಯದ ನಾವೂರ್ ನಿವಾಸಿ ಅಬಿದ್ (22), ಬೆಳ್ಳಾರೆಯ ಗೌರಿಹೊಳೆ ನಿವಾಸಿ ನೌಫಲ್(28) ಬಂಧಿತ ಆರೋಪಿಗಳಾಗಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಈವರೆಗೆ 6 ಆರೋಪಿಗಳನ್ನು ಬಂಧಿಸಲಾಗಿದೆ.