ಪ್ರವೀಣ್ ನೆಟ್ಟಾರ್ ಹತ್ಯೆ, ಕೊಲೆಗಡುಕರನ್ನು ಬಂಧಿಸುವಂತೆ ಸಿದ್ದರಾಮಯ್ಯ ಒತ್ತಾಯ

Social Share

ಬೆಂಗಳೂರು, ಜು.27- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಬಜರಂಗದಳದ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಪೊಲೀಸರು ತಕ್ಷಣ ಕೊಲೆಗಡುಕರನ್ನು ಬಂಧಿಸಿ ಊಹಾಪೋಹಗಳಿಂದ ಶಾಂತಿ-ಸುವ್ಯವಸ್ಥೆ ಕದಡುವುದನ್ನು ತಪ್ಪಿಸಬೇಕು. ಕೊಲೆಗಡುಕರ ಪಕ್ಷ, ಜಾತಿ,ಧರ್ಮವನ್ನು ಲೆಕ್ಕಿಸದೆ ಪೊಲೀಸರು ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸ್ಪಷ್ಟನೆ: ಶ್ರೀರಾಮಸೇನೆ,ಬಜರಂಗದಳ, ಆರ್ ಎಸ್ ಎಸ್ ಮೇಲೆ ಬುಲ್ಡೋಜರ್ ನುಗ್ಗಿಸಬೇಕು ಎಂದು ನಾನು ಕರೆಕೊಟ್ಟಿದ್ದೇನೆ ಎಂಬ ಅರ್ಥದಲ್ಲಿ ಪ್ರಕಟವಾಗಿದ್ದ ಪತ್ರಿಕಾ ವರದಿಯನ್ನು ಬಹಳಷ್ಟು ಬಿಜೆಪಿ ಬೆಂಬಲಿಗರು ಹಂಚಿಕೊಂಡು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ.ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ವಿರೋಧ ಪಕ್ಷದವರು, ಅಲ್ಪಸಂಖ್ಯಾತರು, ಸೈದ್ದಾಂತಿಕ ವಿರೋಗಳ ಮನೆ ಮೇಲೆ ಬುಲ್ ಡೋಜರ್ ಹರಿಸುತ್ತೇವೆ ಎಂಬ ಹಿಂಸಾತ್ಮಕ ಹೇಳಿಕೆಗಳೇ ತಪ್ಪು. ಇಂತಹ ಹೇಳಿಕೆಗಳಿಂದ ಪ್ರಚೋದನೆಗೀಡಾಗಿ ಇನ್ನೊಂದು ಗುಂಪಿನವರು ಶ್ರೀರಾಮಸೇನೆ, ಬಜರಂಗದಳದವರ ಮನೆ ಮೇಲೆ ಬುಲ್ಡೋಜರ್ ಹರಿಸುತ್ತೇವೆ ಎಂದು ಹೇಳುತ್ತಾರೆ. ಇದಕ್ಕೆ ಯಾರೂ ಅವಕಾಶ ನೀಡಬಾರದು ಎಂದಷ್ಟೇ ನಾನು ಹೇಳಿದ್ದೇನೆ.

ಇದನ್ನು ತಿರುಚಿ ಪ್ರಕಟವಾದ ವರದಿಯನ್ನು ಇನ್ನಷ್ಟು ತಿರುಚಿ ಕೆಲವು ಸಮಾಜವಿರೋಧಿ ಶಕ್ತಿಗಳು ನನ್ನ ವಿರುದ್ದ ಅಪಪ್ರಚಾರ ನಡೆಸುತ್ತಿವೆ. ಈ ಪ್ರಚೋದನಕಾರಿ ಮತ್ತು ಕಾನೂನು ಬಾಹಿರ ನಡೆ-ನುಡಿಗಳನ್ನು ನಿಲ್ಲಿಸದೆ ಹೋದರೆ ಅಂತಹವರ ವಿರುದ್ದ ಕಾನೂನುಕ್ರಮಕ್ಕಾಗಿ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದೇನೆ ಎಂದು ಎಚ್ಚರಿಸಿದ್ದಾರೆ.

Articles You Might Like

Share This Article