ಪುತ್ತೂರು, ಜು.27- ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಸೂಳ್ಯ ಹಾಗೂ ಕಡಲ ತಾಲೂಕಿನಲ್ಲಿ ಬಂದ್ ಕರೆ ನೀಡಲಾಗಿದ್ದು, ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ.
ಪುತ್ತೂರಿನ ಗೋಳು ವಾರು ಬಳಿ ಸರ್ಕಾರಿ ಬಸ್‍ಗೆ ಕಲ್ಲು ತೂರಿದ್ದಾರೆ ಎಂದು ತಿಳಿದು ಬಂದಿದ್ದು, ದಕ್ಷಿಣ ಕನ್ನಡದ ಹಲವು ಕಡೆ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಹಲವೆಡೆ ಪ್ರತಿಭಟನೆಗಳು ಕೂಡ ಜೋರಾಗುತ್ತಿದೆ.
ಕರಾವಳಿ ಭಾಗದಲ್ಲಿ ಬಿಜೆಪಿ ಸೇರಿದಂತೆ ಹಲವು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಹತ್ಯೆ ಮಾಡಿರುವ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಹುಬ್ಬಳಿ, ಶಿವಮೊಗ್ಗ, ಬಾಗಲಕೋಟೆ ಸೇರಿದಂತೆ ಹಲವು ಕಡೆ ವಿವಿಧ ಸಂಘಟೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಹತ್ಯೆಯಾದ ಪ್ರವೀಣ್ ಅಂತಿಮ ಯಾತ್ರೆಗೆ ಸಾವಿರಾರು ಮಂದಿ ಪಾಲ್ಗೊಳ್ಳುತ್ತಿದ್ದು, ಪುತ್ತೂರಿನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಅಂತಿಮ ಯಾತ್ರೆ ಸಾಗುವ ದಾರಿಯುದ್ದಕ್ಕೂ ಬಿಗಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಆಕ್ರೋಶ ಭರಿತ ಹಿಂದೂಪರ ಸಂಘಟನೆ ಕಾರ್ಯಕರ್ತರು ದುಷ್ಕøತ್ಯದಲ್ಲಿ ತೊಡಗಿರುವ ಸಂಘಟನೆಗಳನ್ನು ನಿಷೇಧಿಸಬೇಕೆಂದು ಘೋಷಣೆಗಳನ್ನು ಕೂಗಿದ್ದಾರೆ.