Saturday, June 21, 2025
Homeರಾಜ್ಯರಾಜ್ಯದಲ್ಲಿ ಪೂರ್ವ ಮುಂಗಾರು ಚುರುಕು, ಭಾರೀ ಅನಾಹುತ ಸೃಷ್ಟಿಸಿದ ತಡರಾತ್ರಿ ಸುರಿದ ಮಳೆ

ರಾಜ್ಯದಲ್ಲಿ ಪೂರ್ವ ಮುಂಗಾರು ಚುರುಕು, ಭಾರೀ ಅನಾಹುತ ಸೃಷ್ಟಿಸಿದ ತಡರಾತ್ರಿ ಸುರಿದ ಮಳೆ

Pre-monsoon intensifies in the state,

ಬೆಂಗಳೂರು,ಮೇ.15- ರಾಜ್ಯದಲ್ಲಿ ವಿವಿಧೆಡೆ ಪೂರ್ವ ಮುಂಗಾರು ಚುರುಕಾಗಿದ್ದು, ತಡರಾತ್ರಿ ಸುರಿದ ಮಳೆಗೆ ಭಾರೀ ಅನಾಹುತ ಸೃಷ್ಟಿಸಿದೆ.ರಾಮನಗರ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದ್ದು, ಮಾಗಡಿ ಪಟ್ಟಣದ ನಟರಾಜ ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ರಾತ್ರಿಯಿಡೀ ಸಾರ್ವಜನಿಕರು ಜಾಗರಣೆ ಮಾಡುವಂತಾಯಿತು.ಮನೆಯಲ್ಲಿ ಸಂಗ್ರಹವಾಗಿದ್ದ ನೀರನ್ನು ಹೊರಗೆ ಹಾಕುವಲ್ಲಿ ನಿವಾಸಿಗಳು ಪರದಾಡುವಂತಾಯಿತು.

ಧರೆಗುರುಳಿದ ಕಮಾನು :
ಬಿರುಗಾಳಿ ಮಳೆಗೆ ಬಿಡದಿ ಬಳಿ ಜಾಹೀರಾತು ಕಮಾನೊಂದು ಉರುಳಿಬಿದ್ದಿದ್ದು, ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ. ಬೆಂಗಳೂರು-ಮೈಸೂರು ಹಳೆ ರಸ್ತೆಯ ಅವ್ವರಹಳ್ಳಿಯಲ್ಲಿ ಇತ್ತೀಚೆಗೆ ಅಳವಡಿಸಲಾಗಿದ್ದ ಕಮಾನು ರಾತ್ರಿ ಸುರಿದ ಗಾಳಿಮಳೆಗೆ ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದಿದೆ.

ಈ ಸಂದರ್ಭದಲ್ಲಿ ವಾಹನಗಳ ಸಂಚಾರ ಕಡಿಮೆ ಇದ್ದುದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.ಉತ್ತರ ಕರ್ನಾಟಕ ಭಾಗದಲ್ಲೂ ಸಹ ಮಳೆ ಆರ್ಭಟ ಜೋರಾಗಿದ್ದು, ಬಾಗಲಕೋಟೆ ಜಿಲ್ಲೆಯ ಕಟಗೇರಿ ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೀಶ್ವರ, ಕಲಬುರಗಿ ನಗರ ಹಾಗೂ ಬೀದರ್‌ ಜಿಲ್ಲೆಯ ವಿವಿಧೆಡೆ ಬಿರುಸಿನ ಮಳೆಯಾಗಿದೆ. ಹುಬ್ಬಳ್ಳಿಯಿಂದ ಬ್ಯಾಹಟ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯದಲ್ಲಿ ಹಳ್ಳ ತುಂಬಿಹರಿದಿದ್ದು, ಗ್ರಾಮಸ್ಥರು ಹಳ್ಳ ದಾಟಲು ಪರದಾಡುವಂತಾಯಿತು.

ಕೋಲಾರದಲ್ಲೂ ಸಹ ಮಳೆಯಾಗಿದ್ದು, ಬಾಗೇಪಲ್ಲಿ ಪಟ್ಟಣದಲ್ಲಿ ನಿನ್ನೆ ಸಂಜೆ ಸುರಿದ ಗುಡುಗು ಮಿಂಚು ಮಳೆಯಿಂದ ಹೊಲಗದ್ದೆಗಳಲ್ಲಿ ನೀರು ಸಂಗ್ರಹವಾಗಿ ತರಕಾರಿ ಬೆಳೆಗಳು ನಾಶವಾಗಿವೆ.
ಮೈಸೂರು, ಹಾಸನ, ಕೊಡಗು, ತುಮಕೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಸೇರಿದಂತೆ ವಿವಿಧೆಡೆ ಭಾರಿ ಮಳೆಯಾಗಿದೆ. ನೈಋತ್ಯ ಬಂಗಾಳಕೊಲ್ಲಿಯ ಮೇಲೆ ಟ್ರಫ್‌ ಇರುವುದರಿಂದ ಒಂದು ವಾರಗಳ ಕಾಲ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

RELATED ARTICLES

Latest News