ಬೆಂಗಳೂರು,ಫೆ.7-ಎಲ್ಲಾ ಅನ್‍ಲಾಕ್ ಆಯ್ತು, ಇನ್ನೇನೂ ಕೊರೊನಾ ಕಾಟ ಮುಗಿತು ಎಂದು ಮೈಮರೆಯಬೇಡಿ. ಏಕೆಂದರೆ, ಓಮಿಕ್ರಾನಿನ ಉಪತಳಿ ರೂಪಾಂತರಗೊಂಡಿರುವುದರಿಂದ ಹೊಸ ಅಲೆ ಆರಂಭವಾಗುವ ಭೀತಿ ಎದುರಾಗಿದೆ. ಓಮಿಕ್ರಾನ್ ವೈರಸ್‍ನ ವಂಶವಾಹಿಯಿಂದ ಮತ್ತೊಂದು ವೈರಸ್ ಸೃಷ್ಟಿಯಾಗುವ ಸಾಧ್ಯತೆ ಇದ್ದು, ಇದು ಹೊಸ ಅಲೆ ಆರಂಭಕ್ಕೆ ಕಾರಣವಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕೆಲ ದೇಶಗಳಲ್ಲಿ ಬಿಎ.2 ವೈರಸ್ ಹಾವಳಿ ಹೆಚ್ಚಾಗಿದ್ದು, ಈ ರೂಪಾಂತರಿ ನಮ್ಮ ದೇಶದಲ್ಲೂ ಕಾಣಿಸಿಕೊಳ್ಳಲಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ತಜ್ಞರ ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಓಮಿಕ್ರಾನ್ ಉಪ ವಂಶವಾಹಿನಿ ಪತ್ತೆಗೆ ಮುಂದಾಗಿದೆ.
ಕೊರೊನಾ ಸೋಂಕಿನ ಹಲವಾರು ರೂಪಾಂತರಗಳನ್ನು ಕಂಡಿದ್ದೇವೆ. ಹೀಗಾಗಿ ಬಿಎ.2 ವೈರಸ್ ಇರುವುದನ್ನು ಖಚಿತಪಡಿಸಿಕೊಳ್ಳುವತ್ತ ನಾವು ಈಗಾಗಲೇ ಗಮನಹರಿಸಿದ್ದೇವೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ತಿಳಿಸಿದ್ದಾರೆ. ಓಮಿಕ್ರಾನ್ ಉಪ ವಂಶವಾಹಿನಿಯನ್ನು ಪತ್ತೆ ಹಚ್ಚಲು ಜಿನೋಮ್ ಸೀಕ್ವೇನ್ಸಿಂಗ್ ಪರೀಕ್ಷೆಯನ್ನು ಬಳಕೆ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ.
ಹೀಗಾಗಿ ಸೋಂಕು ಕಾಣಿಸಿಕೊಂಡ ವ್ಯಕ್ತಿಗಳ ಮಾದರಿಯನ್ನು ಜಿನೋಮ್ ಸೀಕ್ವೇನ್ಸಿಂಗ್ ಪರೀಕ್ಷೆಗೆ ರವಾನಿಸಿ ಬಿಎ.2 ವೈರಾಣು ಇರುವಿಕೆ ಬಗ್ಗೆ ದೃಢಪಡಿಸಿಕೊಳ್ಳಲು ವೈದ್ಯರಿಗೆ ಸೂಚನೆ ನೀಡಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ಓಮಿಕ್ರಾನ್ ಕಾಣಿಸಿಕೊಂಡ ವ್ಯಕ್ತಿಗಳ ಜೀವಕ್ಕೆ ಇದುವರೆಗೂ ಯಾವುದೇ ಹಾನಿಯಾಗಿಲ್ಲ. ಅದರ ವಂಶವಾಹಿನಿಯೂ ಮಾರಕವಾಗಲಾರದು ಎಂದು ಭಾವಿಸಲಾಗಿದೆ. ಹೀಗಾಗಿ ಹೊಸ ತಳಿಯಿಂದ ಮತ್ತೊಂದು ಅಲೆ ಆರಂಭವಾಗಲಿದೆ ಎನ್ನುವುದಕ್ಕೆ ಇದುವರೆಗೂ ಯಾವುದೆ ಪುರಾವೆ ದೊರೆತಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಆದರೂ, ನಾವು ಹೊಸ ತಳಿ ಪತ್ತೆಗೆ ಎಲ್ಲಾ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಒಂದು ವೇಳೆ ಹೊಸ ತಳಿ ಕಾಣಿಸಿಕೊಂಡರೂ ಅದರ ನಿರ್ಮೂಲನೆಗೆ ನಾವು ಸಿದ್ದರಿದ್ದೇವೆ ಎಂದು ರಂದೀಪ್ ವಿವರಣೆ ನೀಡಿದ್ದಾರೆ.
