ನವದೆಹಲಿ, ಜು.26- ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ರಾಷ್ಟ್ರಪತಿ ಭವನದಲ್ಲಿ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಶುಭ ಹಾರೈಸಿದರು. ಇತ್ತೀಚೆಗೆ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಭರ್ಜರಿ ಬಹುಮತದಿಂದ ಚುನಾಯಿತರಾದ ದ್ರೌಪದಿ ಮುರ್ಮು ಅವರು ನಿನ್ನೆಯಷ್ಟೇ ದೇಶದ ಪ್ರಥಮ ಪ್ರಜೆಯಾಗಿ ಅಧಿಕಾರ ಸ್ವೀಕರಿಸಿದರು.
ಅವರನ್ನು ಇಂದು ಬೆಳಗ್ಗೆ ರಾಜಭವನದಲ್ಲಿ ಭೇಟಿ ಮಾಡುವ ಮೂಲಕ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ತಮ್ಮ ಪುತ್ರಿ ಜತೆ ಇಂದು ನೂತನ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರತಿಭಾ ಪಾಟೀಲ್ ಅವರು ಯುಪಿಎ ಅವಧಿಯಲ್ಲಿ ದೇಶದ ಮೊದಲ ಮಹಿಳಾ ರಾಷ್ಟ್ರಾಧ್ಯಕ್ಷರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಮುರ್ಮು ಅವರು ಬುಡಕಟ್ಟು ಸಮುದಾಯದ ಮೊದಲ ಮಹಿಳಾ ರಾಷ್ಟ್ರಾಧ್ಯಕ್ಷರು ಎಂಬ ಕೀರ್ತಿ ಪಡೆದಿದ್ದಾರೆ.