ರಾಷ್ಟ್ರಪತಿ ಚುನಾವಣೆ : ದ್ರೌಪತಿ ಮುರ್ಮ ಸುಲಭ ಗೆಲುವು ಸಾಧ್ಯತೆ

Social Share

ನವದೆಹಲಿ, ಜು.15- ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಎನ್‍ಡಿಎ ಅಭ್ಯರ್ಥಿ ದ್ರೌಪತಿ ಮುರ್ಮ ಶೇ.60ರಷ್ಟು ಮತಗಳನ್ನು ಕ್ರೋಢಿಕರಿಸಿದ್ದು, ಗೆಲುವು ಸುಲಭ ಸಾಧ್ಯವಾಗಲಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

ಪ್ರಾದೇಶಿಕ ಪಕ್ಷಗಳಾದ ಬಿಜೆಡಿ, ವೈಎಸ್‍ಆರ್-ಸಿಪಿ, ಬಿಎಸ್‍ಪಿ, ಎಐಎಡಿಎಂಕೆ, ಟಿಡಿಪಿ, ಜೆಡಿಎಸ್, ಶಿರೋಮಣಿ ಅಕಾಲಿಕ ದಳ, ಶಿವಸೇನೆ ಮತ್ತು ಈಗ ಜೆಎಂಎಂ ಸೇರಿ ಒಟ್ಟು ಮತಗಳಲ್ಲಿ ಮೂರನೇ ಎರಡು ಭಾಗದಷ್ಟು ಈವರೆಗಿನ ಪ್ರಚಾರದಲ್ಲಿ ಕ್ರೋಢಿಕರಣಗೊಂಡಿವೆ ಎಂದು ಹೇಳಲಾಗಿದೆ.

ಈ ಮೂಲಕ ಜುಲೈ 18ರಂದು ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆ ಇದ್ದು, ಬುಡಕಟ್ಟು ಸಮುದಾಯದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ದಾಖಲೆ ಬರೆಯಲಿದ್ದಾರೆ. ಅಧ್ಯಕ್ಷೀಯ ಚುನಾವಣೆ ಘೋಷಣೆಯಾದ ಬಳಿಕ ಎನ್‍ಡಿಎ ಶೇ.48ರಷ್ಟು ಮತಗಳನ್ನು ಹೊಂದಿತ್ತು. ಯುಪಿಎ ಹಾಗೂ ಇತರ ಪಕ್ಷಗಳು ಒಟ್ಟು ಸೇರಿ ಶೇ.52ರಷ್ಟು ಮತಗಳ ಪ್ರಮಾಣ ಇರುವುದಾಗಿ ವಿಶ್ಲೇಷಿಸಲಾಗಿತ್ತು.

ಬಿಜೆಪಿ ಬುಡಕಟ್ಟು ಸಮುದಾಯ ದ್ರೌಪತಿ ಮುರ್ಮ ಅವರನ್ನು ಎನ್‍ಡಿಎ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ ಬಳಿಕ ಚುನಾವಣಾ ಚಿತ್ರಣವೇ ಬದಲಾಗಿದೆ. ಬಿಜೆಪಿಯೊಂದಿಗೆ ತಾತ್ವಿಕ ಭಿನ್ನಾಭಿಪ್ರಾಯದಿಂದ ದೂರವಾಗಿದ್ದ ಶಿವಸೇನೆ, ಶಿರೋಮಣಿ ಅಕಾಲಿಕ ದಳ, ಜೆಎಂಎಂ, ಎಐಎಡಿಎಂಕೆ, ಬಿಜೆಡಿ, ಬಿಎಸ್‍ಪಿ, ಜೆಡಿಎಸ್ ಸೇರಿ ಅನೇಕ ಪಕ್ಷಗಳು ಮತ್ತೆ ಎನ್‍ಡಿಎ ಅಭ್ಯರ್ಥಿಯತ್ತ ಒಲವು ತೋರಿಸಿವೆ.

ತಮ್ಮ ಬೆಂಬಲ ರಾಷ್ಟ್ರಪತಿ ಚುನಾವಣೆಗೆ ಮಾತ್ರ ಸೀಮಿತ, ಎನ್‍ಡಿಎ ಅಭ್ಯರ್ಥಿಯನ್ನು ಬೆಂಬಲಿಸಿದ ಮಾತ್ರಕ್ಕೆ ಬಿಜೆಪಿಯನ್ನು ಬೆಂಬಲಿಸಿದ್ದೇವೆ ಎಂಬ ಅರ್ಥವಲ್ಲ ಎಂದು ಅನೇಕ ಪಕ್ಷಗಳು ಸ್ಪಷ್ಟ ಪಡಿಸಿವೆ.

ದ್ರೌಪತಿ ಮುರ್ಮ ಬುಡಕಟ್ಟು ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಬಹಳಷ್ಟು ಪಕ್ಷಗಳು ಬೆಂಬಲ ವ್ಯಕ್ತ ಪಡಿಸಿವೆ ಎಂದು ವಿಶ್ಲೇಷಿಸಲಾಗಿದೆ. ಆದರೆ ಈ ಬೆಂಬಲ ರಾಷ್ಟ್ರಪತಿ ಚುನಾವಣೆಗೆ ಮಾತ್ರ ಸೀಮಿತವೇ ಎಂಬ ಪ್ರಶ್ನೆ ಎದುರಾಗಿದೆ.
ಪ್ರಸಕ್ತ ಚುನಾವಣೆಯಲ್ಲಿ ಒಟ್ಟು 10,86.431 ಮತಗಳ ಪೈಕಿ ಎನ್‍ಡಿಎ ಅಭ್ಯರ್ಥಿ ಪರವಾಗಿ 6.67 ಅಂಶಗಳಷ್ಟು ಮತದಾರರ ಬೆಂಬಲ ವ್ಯಕ್ತವಾಗಿದೆ. ಇದರಲ್ಲಿ ಬಿಜೆಪಿ ಸಂಸದರು, ಶಾಸಕರು ಸೇರಿ 3.08 ಲಕ್ಷ ಮತಗಳು ಸೇರಿವೆ.

ಈ ರಾಜಕೀಯ ದ್ರುವೀಕರಣ ರಾಷ್ಟ್ರಪತಿ ಚುನಾವಣೆ ಬಳಿಕವೂ ಮುಂದುವರೆಯವುದಾದರೆ ದೇಶದಲ್ಲಿ ಪ್ರತಿಪಕ್ಷವೇ ಇಲ್ಲದ ವ್ಯವಸ್ಥೆ ನಿರ್ಮಾಣವಾಗುವ ಮುನ್ಸೂಚನೆಯಿದೆ. ಯುಪಿಎ ಅಭ್ಯರ್ಥಿ ಯಶವಂತಶಿನ್ಹಾ ಅವರು ದೇಶಾದ್ಯಂತ ಸಂಚಾರ ಮಾಡಿ ಭಾರೀ ಪ್ರಚಾರ ನಡೆಸುತ್ತಿದ್ದಾರೆ.

Articles You Might Like

Share This Article