ಪುಣ್ಯತಿಥಿ: ವಾಜಪೇಯಿ ಸ್ಮಾರಕಕ್ಕೆ ಗಣ್ಯರ ನಮನ

Social Share

ನವದೆಹಲಿ,ಆ.16- ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 4ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಖರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಅವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.

ದೆಹಲಿಯಲ್ಲಿರುವ ಎ.ಬಿ.ವಾಜಪೇಯಿ ಅವರ ಸದೈವ್ ಅಟಲ್ ಸ್ಮಾರಕಕ್ಕೆ ತೆರಳಿದ ರಾಷ್ಟ್ರ ನಾಯಕರು ಅವರಿಗೆ ಗೌರವ ನಮನ ಸಲ್ಲಿಸಿದರು. ಪ್ರಧಾನಿ ಮೋದಿಯಲ್ಲದೆ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.

ಅಟಲ್ ಬಿಹಾರಿ ವಾಜಪೇಯಿ ಅವರ ಸಾಕು ಮಗಳು ನಮಿತಾ ಕೌಲ್ ಭಟ್ಟಾಚಾರ್ಯ ಅವರು ಕೂಡ ಬಿಜೆಪಿ ನಾಯಕರೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ದಿವಂಗತ ಮಾಜಿ ಪ್ರಧಾನಿ, ಭಾರತೀಯ ಜನತಾ ಪಕ್ಷದ ಹೆಸರಾಂತ ನಾಯಕ, ಹಿರಿಯ ಧುರೀಣರಾಗಿದ್ದ ವಾಜಪೇಯಿ ಅವರು ಅನಾರೋಗ್ಯದಿಂದ 2018ರಲ್ಲಿ ನಿಧನರಾದರು. ಮೂರು ಬಾರಿ ಭಾರತದ ಪ್ರಧಾನಿಯಾಗಿದ್ದ ಅವರನ್ನು ಜನಸಾಮಾನ್ಯರ ಮನುಷ್ಯ, ಅಜಾತ ಶತ್ರು ಎಂದೇ ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ.

Articles You Might Like

Share This Article