ಜು.18ರಂದು ರಾಷ್ಟ್ರಪತಿ ಚುನಾವಣೆ, ಸ್ಟ್ರಾಂಗ್‍ರೂಂ ತಲುಪಿದ ಬ್ಯಾಲೆಟ್ ಬಾಕ್ಸ್

Social Share

ಬೆಂಗಳೂರು,ಜು.13- ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಅವಶ್ಯಕ ಸಾಮಗ್ರಿಗಳು ಹಾಗೂ ಬ್ಯಾಲೆಟ್ ಬಾಕ್ಸ್ ದೆಹಲಿಯ ಭಾರತ ಚುನಾವಣಾ ಆಯೋಗದ ಕೇಂದ್ರ ಕಚೇರಿಯಿಂದ ವಿಧಾನಸೌಧಕ್ಕೆ ತಲುಪಿದ್ದು, ಸ್ಟ್ರಾಂಗ್‍ರೂಂನಲ್ಲಿ ಭದ್ರವಾಗಿವೆ.

ರಾಜ್ಯದ ಬ್ಯಾಲೆಟ್ ಜರ್ನಿಯ ನೇತೃತ್ವವನ್ನು ರಾಜ್ಯ ಜಂಟಿ ಮುಖ್ಯ ಚುನಾವಣಾಧಿಕಾರಿ ರಾಘವೇಂದ್ರ ವಹಿಸಿದ್ದು, ನಿನ್ನೆ ಸಂಜೆ ದೆಹಲಿಯಿಂದ ನಿರ್ಗಮಿಸಿ ರಾತ್ರಿ 8.15ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು. ವಿಶೇಷ ಬ್ಯಾಲೆಟ್ ಜರ್ನಿಯ ಮುಖಾಂತರ ರಾಜ್ಯಕ್ಕೆ ಆಗಮಿಸಿದ ಮತದಾನದ ಸಾಮಗ್ರಿಗಳು ರಾತ್ರಿ 9 ಗಂಟೆಗೆ ವಿಧಾನಸೌಧ ತಲುಪಿವೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹಾಗೂ ಸಹಾಯಕ ಚುನಾವಣಾಧಿಕಾರಿ ವಿಶಾಲಾಕ್ಷಿ ಅವರ ಸಮ್ಮುಖದಲ್ಲಿ ಇದಕ್ಕಾಗಿ ಮೀಸಲಿಟ್ಟಿರುವ ಕೊಠಡಿ ಸಂಖ್ಯೆ 108ರಲ್ಲಿ ಶೇಖರಿಸಿಡಲಾಯಿತು. ಜು.18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, 21ರಂದು ಮತ ಎಣಿಕೆ ನಡೆಯಲಿದೆ.

ರಾಷ್ಟ್ರಪತಿ ಚುನಾವಣೆಯಲ್ಲಿ ರಾಜ್ಯದ ಒಟ್ಟು 224 ಶಾಸಕರು + ಸಂಸತ್ ಸದಸ್ಯರು ಇಲ್ಲಿ ಮತ ಚಲಾಯಿಸಲಿದ್ದಾರೆ. ಉಳಿದ ರಾಜ್ಯದ ಸಂಸದರು ಸಂಸತ್‍ನಲ್ಲಿ ಮತ ಚಲಾಯಿಸಲಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಒಬ್ಬರು ಅನಾರೋಗ್ಯದ ಕಾರಣಕ್ಕಾಗಿ ಇಲ್ಲಿಯೇ ಮತ ಚಲಾಯಿಸಲು ಮನವಿ ಮಾಡಿಕೊಂಡಿರುವ ಕಾರಣಕ್ಕಾಗಿ ಚುನಾವಣಾ ಆಯೋಗ ಅನುಮತಿ ನೀಡಿದೆ ಎಂದು ಅವರು ಹೇಳಿದ್ದಾರೆ.

Articles You Might Like

Share This Article