ಬೆಂಗಳೂರು,ಜು.17- ನಾಳೆ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು ಬಿಜೆಪಿ ಶಾಸಕರು ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೂಡಿ ಎಲ್ಲ ಶಾಸಕರು ಬಸ್ ಮೂಲಕ ನೇರವಾಗಿ ಹೋಟೆಲ್‍ನಿಂದ ವಿಧಾನಸೌಧಕ್ಕೆ ತೆರಳಿ ಮತದಾನ ಮಾಡುವರು.
ಕಳೆದ ರಾತ್ರಿಯಿಂದಲೇ ಶಾಸಕರು ಹೋಟೆಲ್‍ನಲ್ಲಿ ತಂಗಿದ್ದು, ಸಿಎಂ ಜೊತೆ ಭೋಜನ ಸೇವಿಸಿದ್ದಾರೆ. ಇಂದು ದಿನಪೂರ್ತಿ ಶಾಸಕರು ಸಿಎಂ ಜೊತೆ ಹೋಟೆಲ್‍ನಲ್ಲೇ ತಂಗಲಿದ್ದು, ರಾಷ್ಟ್ರಪತಿ ಚುನಾವಣೆ ಸಂಬಂಧ ಸಭೆ ನಡೆಸಲಿದ್ದಾರೆ.
ಬೆಳಗ್ಗೆ ಉಪಹಾರ ಸೇವಿಸಿದ ಬಳಿಕ ಎಲ್ಲಾ ಶಾಸಕರಿಗೆ ಮಾದರಿ ಮತದಾನ ಪ್ರಕ್ರಿಯೆ ನಡೆಯಲಿದೆ.
ನಾಳೆ ಬೆಳಗ್ಗೆ ಸಿಎಂ ಬೊಮ್ಮಾಯಿ, ಬಿಜೆಪಿ ಶಾಸಕರೊಂದಿಗೆ ಉಪಹಾರ ಸೇವಿಸಿ 9.30ಕ್ಕೆ ಬಸ್ ಮೂಲಕ ವಿಧಾನಸೌಧಕ್ಕೆ ತೆರಳುವರು. ಬೆಳಗ್ಗೆ 10-12 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
ವಿಧಾನಸೌಧದಲ್ಲಿ ಮತದಾನಕ್ಕೆ ವ್ಯವಸ್ಥೆ: ವಿಧಾನಸೌಧದ ಮೊದಲ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ರಾಷ್ಟ್ರಪತಿ ಚುನಾವಣೆಯ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಚುನಾವಣಾ ಆಯೋಗದಿಂದ ಅನುಮತಿ ಪಡೆದಿರುವ ಸಂಸದರು ಹಾಗೂ ವಿಧಾನಸಭೆಯ ಚುನಾಯಿತ ಸದಸ್ಯರು ಮತದಾನ ಮಾಡಬಹುದಾಗಿದೆ.
ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ಮಾಡಲು ಅವಕಾಶವಿದ್ದು, ಮತದಾನ ಮಾಡುವ ಸಂದರ್ಭದಲ್ಲಿ ಗುರುತಿನ ಚೀಟಿ ಹಾಜರುಪಡಿಸಬೇಕಾಗಿದೆ. ಗೌಪ್ಯ ಮತದಾನವಾಗಿರುವುದರಿಂದ ಮತದಾನದ ನಂತರ ಮತಪತ್ರವನ್ನು ಬಹಿರಂಗಪಡಿಸುವಂತಿಲ್ಲ. ಮತದಾನದ ವೇಳೆ ಚುನಾವಣಾ ಸಿಬ್ಬಂದಿ ಒದಗಿಸುವ ನೇರಳೆ ಬಣ್ಣದ ಪೆನ್ನನ್ನು ಬಳಸಿ ಮತ ಚಲಾಯಿಸಬೇಕಾಗಿದೆ.