ಬೆಂಗಳೂರು, ಜು.27- ಆಷಾಢ ಮುಗೀತು ಶ್ರಾವಣ ಬಂತು… ಹಬ್ಬಗಳ ಸಾಲು ತಂತು… ಆದ್ರೆ ಅಗತ್ಯವಸ್ತುಗಳ ಬೆಲೆ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಈಗ ಜಿಎಸ್ಟಿ ಹೊರೆ ಬೇರೆ ಹೊರಿಸಲಾಗಿದೆ. ಇದರಿಂದ ಜನಸಾಮನ್ಯರ ಬದುಕು ಅಕ್ಷರಶಃ ತೀವ್ರಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದರೆ, ಏನ್ ಮಾಡೋದು ನಮ್ಮ ಆಚಾರ, ಸಂಸ್ಕøತಿ ಪಾಲಿಸಲು ಹಬ್ಬಗಳನ್ನು ಆಚರಿಸಲೇಬೇಕು.
ಈಗಾಗಲೇ ಅಡುಗೆ ಎಣ್ಣೆ, ಬೇಳೆಕಾಳುಗಳ ಬೆಲೆ ಸೆಂಚುರಿ ದಾಟಿವೆ. ಈ ಮಧ್ಯೆ ಹಣ್ಣುಗಳ ಸರದಿ ಪ್ರಾರಂಭವಾಗಿದೆ. ಶ್ರಾವಣ ಮಾಸದ ಮೊದಲನೆ ಹಬ್ಬವಾದ ವರಮಹಾಲಕ್ಷ್ಮಿ ಆಚರಣೆಗೆ ಈಗಾಗಲೇ ಭರದ ಸಿದ್ಧತೆಗಳು ನಡೆಯುತ್ತಿವೆ. ಈ ಹಬ್ಬಕ್ಕೆ ಹಣ್ಣುಗಳ ಬೆಲೆ ಗ್ರಾಹಕರ ಜೇಬು ಸುಡುವುದು ಗ್ಯಾರಂಟಿ. ಸದ್ದಿಲ್ಲದೆ ಹಣ್ಣುಗಳ ಬೆಲೆ ನಿಧಾನವಾಗಿ ಏರುತ್ತಿವೆ.
ಕಳೆದ ಕೆಲ ತಿಂಗಳುಗಳಿಂದ ಪಾತಾಳ ತಲುಪಿದ್ದ ಏಲಕ್ಕಿ ಬಾಳೆ ಸೆಂಚುರಿಯತ್ತ ಧಾವಿಸಿದೆ. ಹಬ್ಬಕ್ಕೆ ಕೆಜಿ 100ರೂ. ಮಾರಾಟವಾಗುವುದರಲ್ಲಿ ಅನುಮಾನವಿಲ್ಲ. ಕೊಳೆ ರೋಗ ಹಾಗೂ ಕಳೆದ ಮೇ ಮತ್ತು ಜೂನ್ ತಿಂಗಳಲ್ಲಿ ಸುರಿದ ಮಳೆಯಿಂದ ಬೆಳೆ ನಾಶವಾಗಿ ಇಳುವರಿ ಕುಂಠಿತವಾಗಿದೆ. ಅಲ್ಲದೆ, ಶ್ರಾವಣದಲ್ಲಿ ಉತ್ತಮ ಬೆಲೆ ಬರುತ್ತದೆ ಎಂದು ಕೆಲ ರೈತರು ಬಾಳೆಗೊನೆಗಳನ್ನು ಕಟಾವು ಮಾಡದೆ ಉಳಿಸಿಕೊಂಡಿದ್ದಾರೆ. ಹಾಗಾಗಿ ಬೆಲೆ ಏರಿಕೆಯಾಗಿದೆ.
ಕಳೆದ ತಿಂಗಳು ಏಲಕ್ಕಿ ಬಾಳೆ 50 ರಿಂದ 60 ರೂ.ಗೆ ಮಾರಾಟವಾಗುತ್ತಿತ್ತು. ಇದೀಗ 100ರೂ. ಗಡಿಯತ್ತ ಧಾವಿಸಿದೆ. ಪಚ್ಚಬಾಳೆಹಣ್ಣು ಸಹ 10 ರಿಂದ 20 ರೂ. ಹೆಚ್ಚಳವಾಗಿದೆ. ಕೋವಿಡ್ ಹಾಗೂ ಸೂಕ್ತ ಬೆಲೆ ಸಿಗದ ಕಾರಣ ಕಳೆದ ಎರಡು ವರ್ಷಗಳಿಂದ ಬಹುತೇಕ ರೈತರು ಬೆಳೆ ಬೆಳೆಯಲು ಮುಂದಾಗುತ್ತಿಲ್ಲ. ಅಲ್ಲದೆ, ಕೊಳೆ ರೋಗ ಹಾಗೂ ಭಾರೀ ಮಳೆಯಿಂದ ಬೆಳೆ ನಾಶವಾಗಿದ್ದು, ಪೂರೈಕೆಯಲ್ಲಿ ವ್ಯತ್ಯಯವಾಗಿ ಬೆಲೆ ಹೆಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ.
ಸಾಮಾನ್ಯವಾಗಿ ಶ್ರಾವಣದಲ್ಲಿ ಹಣ್ಣು, ಹೂ ಬೆಲೆ ಜಾಸ್ತಿಯೇ ಇರುತ್ತದೆ. ಆದರೆ, ಕೋವಿಡ್ನಿಂದ ಕಳೆದ ಎರಡು ವರ್ಷಗಳಿಂದ ಸರಳವಾಗಿ ಹಬ್ಬ ಆಚರಿಸಿದ್ದ ಜನರು ಈ ಬಾರಿ ಜೋರಾಗಿ ಹಬ್ಬ ಆಚರಣೆಯಲ್ಲಿ ತೊಡಗಿದ್ದಾರೆ. ಹಾಗಾಗಿ ಬೇಡಿಕೆ ಹೆಚ್ಚಾಗಿ ಬೆಲೆ ಹೆಚ್ಚಳವಾಗುತ್ತಿದೆ.
ಕುಸಿದ ಟೊಮ್ಯಾಟೋ: ಕಳೆದ ತಿಂಗಳು ಸೆಂಚುರಿ ಬಾರಿಸಿದ್ದ ಟೊಮ್ಯಾಟೋ ಪಾತಾಳ ತಲುಪಿದೆ. ಅಶಾಢದಲ್ಲಿ ಯಾವುದೇ ಶುಭ ಸಮಾರಂಭಗಳು ನಡೆಯದ ಕಾರಣ ಬೆಲೆ ಕುಸಿತ ಒಂದೆಡೆಯಾದರೆ, ಮಳೆಯಿಂದ ಫಸಲು ನಾಶವಾಗಿದೆ. ಈಗ ಬೆಳೆ ಬೆಳೆದರೆ ಸೂಕ್ತ ಬೆಲೆ ಸಿಕ್ಕೇ ಸಿಗುತ್ತದೆ ಎಂದು ಬಹುತೇಕ ರೈತರು ನಾಟಿ ಮಾಡಿದ್ದರು. ಏಕಕಾಲಕ್ಕೆ ಫಸಲು ಜಾಸ್ತಿ ಬಂದಿದ್ದು, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾಲು ಬರುತ್ತಿರುವುದರಿಂದ ಬೆಲೆ ಕುಸಿತವಾಗಿದೆ.
ರಾಜ್ಯದ ಪ್ರತಿಷ್ಠಿತ ಟೊಮ್ಯಾಟೋ ಮಾರುಕಟ್ಟೆಗಳಾದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳು ಬರುತ್ತಿದ್ದು, 20 ಕೆಜಿ ತೂಕದ ಒಂದು ಕ್ರೇಟ್ 150 ರೂ.ಗೆ ಮಾರಾಟವಾಗುತ್ತಿದೆ. ಚಿಲ್ಲರೆಯಲ್ಲಿ ಮಾತ್ರ ಕೆಜಿಗೆ 10 ರೂ.ಗೆ ಮಾರಾಟವಾಗುತ್ತಿದೆ.
ಉಳಿದ ತರಕಾರಿಗಳ ಬೆಲೆ ಕೆಜಿಗೆ 40ರೂ. ಮೇಲಿದೆ. ನಾಟಿ ಬೀನ್ಸ್ 50, ಕ್ಯಾಪ್ಸಿಕಂ 60, ಮೂಲಂಗಿ 30, ನುಗ್ಗೆಕಾಯಿ 40, ತೊಂಡೆಕಾಯಿ 40 ರೂ.ಗೆ ಮಾರಾಟವಾಗುತ್ತಿದೆ. ಶ್ರಾವಣ ಮಾಸದಲ್ಲಿ ಹೆಚ್ಚು ಶುಭ ಸಮಾರಂಭಗಳು ನಡೆಯುವುದರಿಂದ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.